ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರ ದರ್ಬಾರ್

ಬಿಜೆಪಿ ಪೋಸ್ಟರ್ ಬಿಡುಗಡೆ

ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿಂದು ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್ ವಾಲ್‌ಪೋಸ್ಟರ್‌ನ್ನು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರವರು ಬಿಡುಗಡೆ ಮಾಡಿದರು. ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಪ್ರಧಾನ ಕಾರ್ಯದರ್ಶಿ, ಎಂ.ಎಲ್.ಸಿ. ಎನ್. ರವಿಕುಮಾರ್ ಮತ್ತಿತರರು ಇದ್ದಾರೆ.

ಬೆಂಗಳೂರು, ಅ. ೨೦- ಆದಾಯ ತೆರಿಗೆ ಇಲಾಖೆ ಬೆಂಗಳೂರಿನಲ್ಲಿ ಐಟಿ ದಾಳಿ ನಡೆಸಿದ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ವಾಕ್ಸಮರ ಮುಂದುವರೆದಿದ್ದು, ಇಂದು ಬಿಜೆಪಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಭಾವಚಿತ್ರ ಇರುವ ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್‌ನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಈ ಪೋಸ್ಟರ್‌ಗಳನ್ನು ಬಿಜೆಪಿಯ ಸಂಸದ ಡಿ.ವಿ. ಸದಾನಂದಗೌಡ, ಶಾಸಕರುಗಳಾದ ರವಿಸುಬ್ರಹ್ಮಣ್ಯ, ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಇವರುಗಳು ಬಿಡುಗಡೆ ಮಾಡಿದರು.
ಈ ಪೋಸ್ಟರ್‌ನಲ್ಲಿ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ, ಅಡಿಯಿಂದ ಮುಡಿಯವರೆಗೆ ಭ್ರಷ್ಟರದ್ದೇ ಪ್ರಭಾವಳಿ ಎಂದು ಬರೆಯಲಾಗಿದ್ದು, ಪೋಸ್ಟರ್‌ನಲ್ಲಿ ಪ್ರಥಮದಲ್ಲಿ ರಾಹುಲ್‌ಗಾಂಧಿ, ಅದರ ಕೆಳಗೆ ರಣದೀಪ್‌ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಭಾವಚಿತ್ರ ಹಾಕಲಾಗಿದೆ. ಸುರ್ಜೇವಾಲಾ ಭಾವಚಿತ್ರದ ಕೆಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಭಾವಚಿತ್ರದ ಕೆಳಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವಚಿತ್ರ ಹಾಕಲಾಗಿದ್ದು, ಸಿದ್ದರಾಮಯ್ಯನವರ ಭಾವಚಿತ್ರದ ಕೆಳಗೆ ಅವರ ಪುತ್ರ ಯತೀಂದ್ರ ಹಾಗೂ ಭೈರತಿ ಸುರೇಶ್ ಅವರ ಭಾವಚಿತ್ರ ಹಾಕಲಾಗಿದೆ. ಅವರ ಈ ಚಿತ್ರದ ಕೆಳಗಡೆ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ಎಂದು ರಾಮಯ್ಯ ಹಾಗೂ ಕೆಂಪಣ್ಣ ಅವರ ಭಾವಚಿತ್ರ ಹಾಕಲಾಗಿದೆ.
ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರದ ಕೆಳಗೆ ಗುತ್ತಿಗೆದಾರ ಅಂಬಿಕಾಪತಿ ಭಾವಚಿತ್ರ ಹಾಕಿ ಪೋಸ್ಟರ್‌ನ್ನು ಬಿಜೆಪಿ ಬಿಡುಗಡೆ ಮಾಡಿದೆ. ಅದರ ಕೆಳಗಡೆ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್ ಎಂದು ಪ್ರದೀಪ್, ಪ್ರಮೋದ್, ಪ್ರಹ್ಲಾದ್ ಲೂಟ್ ಕಂಪೆನಿ ಎಂದು ಪೋಸ್ಟರ್‌ನಲ್ಲಿ ಮುದ್ರಿಸಲಾಗಿದೆ.
ಸಿಬಿಐ ತನಿಖೆಗೆ ಒತ್ತಾಯ
ಈ ಪೋಸ್ಟರ್‌ನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಡಿ.ವಿ. ಸದಾನಂದಗೌಡ ಅವರು ಐಟಿ ದಾಳಿಯ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿ ಡಿ.ಕೆ. ಶಿವಕುಮಾರ್ ಕಲೆಕ್ಷನ್ ಮಾಡಲು ಬೆಳಗಾವಿಗೆ ಹೋಗಿದ್ದರು ಎಂದು ಹರಿಹಾಯ್ದರು.
ರಾಜ್ಯದಲ್ಲಿ ಒಳ್ಳೆಯ ಗುತ್ತಿಗೆದಾರರಿಗೆ ಅವಕಾಶ ಸಿಗುತ್ತಿಲ್ಲ. ಬಿಲ್‌ಗಳು ಸರಿಯಾಗಿ ಪಾವತಿಯಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ಗುತ್ತಿಗೆದಾರರನ್ನು ಕರೆಸಿ ಮಾತನಾಡುತ್ತಾರೆ. ಬಿಲ್ ಕೊಡದ ಕಾರಣಕ್ಕೆ ಹಲವೆಡೆ ಇಂದಿರಾ ಕ್ಯಾಂಟೀನ್ ಕೂಡ ಬಂದ್ ಆಗಿದೆ ಎಂದರು.
ರಾಜೀನಾಮೆಗೆ ಒತ್ತಾಯ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಸದಾನಂದಗೌಡ ಒತ್ತಾಯಿಸಿದರು.