ಎಟಿಎಂ ದರೋಡೆ ಬ್ಯಾಂಕ್ ಕ್ಯಾಷಿಯರ್ ಸೇರಿ 7ಜನರ ಬಂಧನ

ವಿಜಯಪುರ 01- ತೀವ್ರ ಬೆಚ್ಚಿಬೀಳಿಸಿದ್ದ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿರುವ ಎಟಿಎಂ ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬೇಧಿಸಿದ್ದಾರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕಿನ್ ಕ್ಯಾಷಿಯರ್ ಸೇರಿದಂತೆ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮುದ್ದೇಬಿಹಾಳದ ಮಂಜುನಾಥ ಶಿದಯ್ಯ ಬಿನ್ನಾಳಮಠ, ಗಂಗಾವತಿ ತಾಲೂಕಿನ ಮರಕುಂಟಿ ನಿವಾಸಿ ಬಸವರಾಜ ಪಂಪಾಪತಿ ಮೇಟಿ, ಮುದ್ದೇಬಿಹಾಳದ ಸುರೇಶ ಯಂಕಪ್ಪ ದೇವರಹಿಪ್ಪರಗಿ, ಮುತ್ತು ಯಲ್ಲಪ್ಪ ದೇವರಹಿಪ್ಪರಗಿ, ನಾಗರಜ ಉರ್ಫ್ ನಾಗಪ್ಪ ಗುರಪ್ಪ ಉರ್ಫ್ ಗೌಂಡಿ ಗುರಪ್ಪ ಗೋಲ್ಲರ, ಯೂನಿಯನ್ ಬ್ಯಾಂಕ್ ಸಿಬ್ಬಂದಿ ವೀರಲ್ಲ ಲಕ್ಕಪ್ಪ ಮಂಗಳೂರ, ಯೂನಿಯನ್ ಬ್ಯಾಂಕ್‍ನಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಿಸ್ಮಿತಾ ಹುಸನಪ್ಪ ಶರಾಭಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 13.18 ಲಕ್ಷ ರೂ. ನಗದು, ಎಟಿಎಂನಲ್ಲಿದ್ದ ಹಣ ಹಾಕುವ ಕ್ಯಾರೇಟ್‍ಗಳು, ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್, ಐದು ಸ್ಮಾರ್ಟ್‍ಫೋನ್‍ಗಳು, ಕಬ್ಬಿಣದ ರಾಡ್‍ಗಳು ಸೇರಿದಂತೆ ಒಟ್ಟು 18,68,000 ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣವನ್ನು ಬೇಧಿಸಿದ್ದಾರೆ, ಅನೇಕ ಕಡೆಗಳಲ್ಲಿ ತನಿಖೆಯ ಜಾಡು ಹಿಡಿದು ಸಂಚರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ದಿ.18 ರಂದು ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನ್ನು ಪಾಸ್‍ವರ್ಡ್ ಉಪಯೋಗಿಸಿ ಕಳುವುದು ಮಾಡಿದ್ದರು, ಹಣ ತುಂಬಿದ ಬಾಕ್ಸ್‍ಗಳ ಸಮೇತ 16,08,000 ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಪ್ರಕರಣ ದಾಖಲಾಗಿತ್ತು.

ಎಎಸ್‍ಪಿ ಡಾ.ಶ್ರೀರಾಮ ಅರಸಿದ್ಧಿ ನೇತೃತ್ವದಲ್ಲಿ ಈ ಪ್ರಕರಣ ಬೇಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಇಲಾಖೆ,ಮುದ್ದೇಬಿಹಾಳ ನಗರದಲ್ಲಿ ಅಳವಡಿಸಿದ ಸಿ.ಸಿ ಟಿ.ವಿಗಳ ಹಾಗೂ ತಾಂತ್ರಿಕ ಸುಳಿವುಗಳನ್ನು ಬಳಸಿ, ತನಿಖಾ ತಂಡವು ಮೈಸೂರ, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಬೇಟಿ ಮಾಡಿ ತನಿಖೆ ಕೈಕೊಂಡಿತು.

ಈ ಎಲ್ಲ ರೂಪದಲ್ಲಿ ತನಿಖೆ ನಡೆಸಿದಾಗ ಯೂನಿಯನ್ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವುದು ಗೊತ್ತಾಗಿ ಮತ್ತಷ್ಟು ತನಿಖೆ ನಡೆದಾಗ ಸತ್ಯಾಂಶ ಹೊರಬಂದಿದೆ, ಆರೋಪಿಗಳು ಬಂಧಿತವಾಗಿರುವ ಯೂನಿಯನ್ ಬ್ಯಾಂಕ್ ಸಿಬ್ಬಂದಿಯ ನೆರವಿನಿಂದ ಎಟಿಎಮ್ ಪಾಸ್‍ವರ್ಡ್ ಹಾಗೂ ನಕಲಿ ಕೀ ಬಳಸಿ ಎಟಿಎಂ ಕದ್ದಿದ್ದನ್ನು ವಿಚಾರಣೆ ವೇಳೆ ಹೇಳಿದ್ದಾರೆ. ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ವಿವರಿಸಿದರು.

ತನಿಖಾ ತಂಡದ ಕಾರ್ಯಕ್ಕೆ ಶ್ಲಾಘನೆ

ಎಎಸ್‍ಪಿ ಡಾ.ಶ್ರೀರಾಮ ಅರಸಿದ್ಧಿ, ಡಿವೈಎಸ್‍ಪಿ ಅರುಣಕುಮಾರ ಕೋಳೂರ, ಸಿಪಿಐ ಆನಂದ ವಾಘ್ಮೋರೆ, ಪಿಎಸ್‍ಐಗಳಾದ ರೇಣುಕಾ ಜಕನೂರ, ವಿನೋದ ದೊಡಮನಿ, ಸಿಬ್ಬಂದಿಗಳಾದ ಆರ್.ಎಸ್. ಪಾಟೀಲ, ಎಸ್.ಎಲ್.ಹತ್ತರಕಿಹಾಳ, ಎ.ಎಸ್.ಬಿರಾದಾರ, ವೈ.ಎನ್.ಹಾಲಗಂಗಾಧರಮಠ, ಎಸ್.ಎಂ.ಬಿರಾದಾರ, ಎಸ್.ಪಿ.ಜಾಧವ, ಸಂಗಮೇಶ ಚಲವಾದಿ, ಆಸೀಫ್ ಲಷ್ಕರಿ ಅವರನ್ನೊಳಗೊಂಡ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹರ್ಷ ವ್ಯಕ್ತಪಡಿಸಿ ಶ್ಲಾಘಿಸಿದರು.