ಎಟಿಎಂ ಒಡೆದು ಹಣ ದೋಚಲು ಯತ್ನ: ಆರೋಪಿ ಸೆರೆ

ಬೆಂಗಳೂರು,ಜ.೧೩-ಎಟಿಎಂ ಯಂತ್ರ ಒಡೆದು ಹಣ ದೋಚಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಅಮಿತ್ ಮಿಶ್ರಾ ಬಂಧಿತ ಆರೋಪಿಯಾಗಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಜಿಗಣಿ ಕೈಗಾರಿಕಾ ಪ್ರದೇಶದ ಫೈಕಸ್ ಪ್ಯಾಕ್ಸ್ ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಜಿಗಣಿ ಕುಂಟ್ಲರೆಡ್ಡಿ ಬಡಾವಣೆಯಲ್ಲಿ ಬಾಡಿಗೆ ಮನಡ ಮಾಡಿಕೊಂಡು ವಾಸವಾಗಿದ್ದ. ದುಡಿಮೆ ಹಣ ಸಾಕಾಗದೇ ದಿಢೀರ್ ಹಣ ಗಳಿಸಲು ಯೋಜನೆ ರೂಪಿಸಿ ಕಂಠಪೂರ್ತಿ ಕುಡಿದು ಇಂದು ಮುಂಜಾನೆ ಜಿಗಣಿ ಪೊಲೀಸ್ ಠಾಣೆಯ ಕೂಗಳತೆ ದೂರದ ಹೆಚ್?ಡಿಎಫ್?ಸಿ ಎಟಿಎಂ ಹಾಗೂ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರಗಳಿಗೆ ನುಗ್ಗಿದ್ದ.
ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಎರಡು ಎಟಿಎಂ ಯಂತ್ರಗಳನ್ನು ಒಡೆದು ಹಣ ದೋಚಲು ಇನ್ನಿಲ್ಲದ ಕಸರತ್ತು ನಡೆಸಿದ್ದಾನೆ.
ಎಟಿಎಂ ಯಂತ್ರವನ್ನು ಹೊಡೆದು ಹಣ ದೋಚಲು ಯತ್ನಿಸಿದ್ದ ಶಬ್ದ ಕೇಳಿ ಗಸ್ತಿನಲ್ಲಿದ್ದ ಜಿಗಣಿ ಪೊಲೀಸರು ಎಟಿಎಂ ಕೇಂದ್ರದತ್ತ ಧಾವಿಸಿದ್ದು ಅಲ್ಲಿದ್ದ ಆರೋಪಿ ಅಮಿತ್ ಮಿಶ್ರಾನನ್ನು ಪ್ರಶ್ನಿಸಿದಾಗ ಎಟಿಎಂ ಯಂತ್ರ ರಿಪೇರಿ ಮಾಡುತ್ತಿರುವುದಾಗಿ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದ್ದಾನೆ.
ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ತಮ್ಮದೇ ದಾಟಿಯಲ್ಲಿ ವಿಚಾರಿಸಿದಾಗ ಹಣ ದೋಚಲು ಯತ್ನಿಸಿರುವುದನ್ನು ಬಾಯ್ಬಿಟ್ಟಿದ್ದಾನೆ
ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿಯ ಯತ್ನ ವಿಫಲವಾಗಿದೆ ಮತ್ತು ಎರಡು ಎಟಿಎಂಗಳಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಖದೀಮನ ಪಾಲಾಗುವುದು ತಪ್ಪಿದ್ದು, ಜಿಗಣಿ ಪೋಲಿಸರ ಮಿಂಚಿನ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.