ಎಟಿಎಂನಂತೆ ಪತ್ನಿ ಬಳಕೆ ಹೈಕೋರ್ಟ್ ಛಾಟಿ

ಬೆಂಗಳೂರು, ಜು.೧೯- ಯಾವುದೇ ಭಾವನಾತ್ಮಕ ಸಂಬಂಧವಿಲ್ಲದೇ ಪತ್ನಿಯನ್ನು ಹಣ ನೀಡುವ ಹಸು ಅಥವಾ ಎಟಿಎಂನಂತೆ ನಡೆಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹಿಳೆಗೆ ಗಂಡನಿಂದ ವಿಚ್ಛೇದನ ನೀಡಿದ್ದು,
ಪತಿಯಿಂದ ವಿಚ್ಛೇದನ ನೀಡದ ಕೌಟುಂಬಿಕ ಕೋರ್ಟ್ ಆದೇಶದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಪತಿ ಮಹಿಳೆಯೊಂದಿಗೆ ಯಾವುದೇ ಭಾವನಾತ್ಮಕ ಬಾಂಧವ್ಯವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ಪತಿಯ ಪಾತ್ರವನ್ನು ಪೋಷಿಸಿದ್ದಾರೆ. ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ ೬೦ ಲಕ್ಷ ರೂಗಳನ್ನು ಪತಿ ಪಡೆದುಕೊಂಡಿದ್ದಾರೆ. ಆಕೆಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡಿದ್ದಾರೆ. ಗಂಡನ ಈ ವರ್ತನೆಯಿಂದ ಹೆಂಡತಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದು ಮಾನಸಿಕ ಕಿರುಕುಳಕ್ಕೆ ಸಮವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಪತಿಯಿಂದ ಪತ್ನಿಗೆ ಆಗಿರುವ ನೋವು, ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು. ಕೌಟುಂಬಿಕ ನ್ಯಾಯಾಲಯ ಈ ಎಲ್ಲ ಅಂಶಗಳನ್ನು ಪರಿಗಣಿಸಲು ವಿಫಲವಾಗಿದೆ. ಇದಲ್ಲದೇ, ನ್ಯಾಯಾಲಯವು ಮಹಿಳೆಯನ್ನು ಪೂರ್ಣ ವಿಚಾರಿಸದೇ ಕೇವಲ ಹೇಳಿಕೆಗಳನ್ನು ಮಾತ್ರ ದಾಖಲಿಸಿದೆ ಎಂದಿದೆ.
ವಿಚ್ಛೇದನಕ್ಕೆ ಅಸ್ತು:
ನೊಂದ ಪತ್ನಿಯ ವಾದವನ್ನು ಪರಿಗಣಿಸಿರುವ ನ್ಯಾಯಾಲಯ ಅವರಿಗೆ ವಿಚ್ಛೇದನ ದಯಪಾಲಿಸಿದೆ. ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಕ್ರೌರ್ಯದ ಆರೋಪಗಳನ್ನು ಪ್ರಕರಣದ ಅರ್ಹತೆಯ ಮೇಲೆ ಪರಿಶೀಲಿಸಬೇಕು ಎಂದು ಪೀಠವು ಒತ್ತಿಹೇಳಿದೆ.
ಪ್ರಕರಣದ ವಿವರ:
೧೯೯೧ ರಲ್ಲಿ ವಿವಾಹವಾದ ದಂಪತಿ ೨೦೦೧ ರಲ್ಲಿ ಹೆಣ್ಣು ಮಗುವನ್ನು ಹೊಂದಿದ್ದರು. ವ್ಯಾಪಾರ ನಡೆಸುತ್ತಿದ್ದ ಪತಿ ಸಾಲದ ಸುಳಿಗೆ ಸಿಲುಕಿದ್ದ. ಮರುಪಾವತಿಸಲು ಕಷ್ಟಪಡುತ್ತಿದ್ದರು. ಇದು ಮನೆಯಲ್ಲಿ ನಿತ್ಯ ಜಗಳಕ್ಕೆ ಕಾರಣವಾಗಿತ್ತು. ಈ ವೇಳೆ ಮಹಿಳೆ ಜೀವನಕ್ಕಾಗಿ ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡಿದ್ದರು. ೨೦೦೮ ರಲ್ಲಿ ಹೆಂಡತಿ ತನ್ನ ಪತಿಗೆ ದುಬೈನಲ್ಲಿ ಸಲೂನ್ ತೆರೆಯಲು ೬೦ ಲಕ್ಷ ಹಣವನ್ನು ನೀಡಿದ್ದಾರೆ.
ಆದರೆ, ನಷ್ಟಕ್ಕೀಡಾದ ಪತಿ ಭಾರತಕ್ಕೆ ವಾಪಸ್ ಆಗಿದ್ದರು. ಹಣ ನೀಡಲು ಪೀಡಿಸುತ್ತಿದ್ದ ಪತಿಯಿಂದ ಮಹಿಳೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂದು ಕೋರ್ಟ್ ಅರ್ಜಿ ವಜಾ ಮಾಡಿತ್ತು. ಇದರ ವಿರುದ್ಧ ಆ ಮಹಿಳೆಯು ಹೈಕೋರ್ಟ್ ಮೊರೆ ಹೋಗಿದ್ದರು.