
ಕೋಲಾರ,ನ,೬:ಎಟಿಎಂ ಸೆಂಟರ್‌ಗಳ ಬಳಿ ಹಣ ಡ್ರಾ ಮಾಡಲು ಬರುತ್ತಿದ್ದ ಅಮಾಯಕ ಸಾರ್ವಜನಿಕರಿಗೆ ವಂಚಿಸಿ ಅವರಿಂದ ಎಟಿಎಂ ಕಾರ್ಡ್ ಮತ್ತು ಪಿನ್ ನಂಬರ್ ಪಡೆದುಕೊಂಡು ಅವರಿಗೆ ನಕಲಿ ಎಟಿಎಂ ಕಾರ್ಡ್ ನೀಡಿ, ಸಾರ್ವಜನಿಕರು ಅಲ್ಲಿಂದ ತೆರಳಿದ ನಂತರ ಅವರ ಎಟಿಎಂ ಕಾರ್ಡ್‌ನಲ್ಲಿದ್ದ ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದ ಅಂತರರಾಜ್ಯ ವಂಚಕರನ್ನು ಕೋಲಾರ ಪೋಲಿಸರು ಬಂಧಿಸಿದ್ದಾರೆ.
ಸೆ.೩ರಂದು ಬೆಳಿಗ್ಗೆ ಸುಮಾರು ೧೧.೩೦ರ ಸಮಯದಲ್ಲಿ ಹೊಸಕೋಟೆ ಮೂಲದ ಪರ್ವೀನ್ ತಾಜ್ ಮುಳಬಾಗಿಲು ನಗರದಲ್ಲಿನ ಕೆನರಾ ಬ್ಯಾಂಕ್‌ನಲ್ಲಿ ೧೬ ಸಾವಿರ ಹಣ ಡ್ರಾ ಮಾಡಿಕೊಂಡು ಬ್ಯಾಂಕಿನಿಂದ ಹೊರಗಡೆ ಬಂದು ಹಣ ಎಣಿಕೆ ಮಾಡಿಕೊಳ್ಳುತ್ತಿದ್ದಾಗ ಮೂರು ಜನ ಅಪರಿಚಿತ ಅಸಾಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಪರ್ವೀನ್ ತಾಜ್ ರವರ ಬಳಿ ಇದ್ದ ಹಣವನ್ನು ಎಣಿಕೆ ಮಾಡಿಕೊಡುವ ನೆಪದಲ್ಲಿ ತೆಗೆದುಕೊಂಡು, ಮೋಸ ಮಾಡಿ ಹಣ ಎತ್ತಿಕೊಂಡು ಪರಾರಿಯಾಗಿದ್ದು, ಈ ಬಗ್ಗೆ ಮುಳಬಾಗಿಲು ನಗರ ಪೋಲಿಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡಿದರು.
ಈ ಪ್ರಕರಣದ ಪತ್ತೆ ಸಂಬಂಧ ಎಸ್.ಪಿ. ಎಂ.ನಾರಾಯಣ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ. ವಿ.ಬಿ.ಭಾಸ್ಕರ್, ಮುಳಬಾಗಿಲು ಡಿವೈಎಸ್‌ಪಿ ಡಿ.ಸಿ.ನಂದಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಕೆ.ಜಿ.ಸತೀಶ್, ಎಲ್.ಮಮತ ಮತ್ತು ಗಂಗಾಧರ್ ಹಾಗೂ ಸಿಬ್ಬಂದಿಯಾದ ಚಲಪತಿ, ರವಿನಾಯ್ಕ ತಂಡದ ಪ್ರಯತ್ನದಿಂದ ಈ ಪ್ರಕರಣದಲ್ಲಿ ಆರೋಪಿಗಳಾದ ತಮಿಳುನಾಡಿನ ಹೊಸೂರು ತಾಲ್ಲೂಕಿನವರಾದ ಎನ್. ಮಂಜುನಾಥ (೩೩),
ಮಂಜುನಾಥ (೪೮), ಚಿನ್ನದೊರೈ (೨೬) ಬಂಧಿಸಿ, ೧೩,೦೦೦ ರೂ.ಗಳ ನಗದು ಹಣ ನಾಲ್ಕು ಎಟಿಎಂ ಕಾರ್ಡ್‌ಗಳು ಹಾಗೂ ಕೃತ್ಯಕ್ಕೆ ಸಂಬಂಧಿಸಿದ ಟಿ.ವಿ.ಎಸ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ವಿಚಾರಣಾ ಕಾಲದಲ್ಲಿ ಈ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮತ್ತಿಕೆರೆ ಪೋಲಿಸ್ ಠಾಣಾ ಸರಹದ್ದಿನಲ್ಲಿ ೨೦೧೯ನೇ ಸಾಲಿನಲ್ಲಿ ಹಣ ಕಾಸಿನ ವಿಚಾರಕ್ಕೆ ವಿಜಯ್ ಕುಮಾರ್ (೩೮) ರವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
೨೦೨೨ನೇ ಸಾಲಿನಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ಒನ್ ಟೌನ್ ಪೋಲಿಸ್ ಠಾಣಾ ಸರಹದ್ದಿನಲ್ಲಿ ಚಿತ್ತೂರಿನ ಮುನಿಸ್ವಾಮಿ, ಎಂಬುವರಿಂದ ಎಟಿಎಂ ಕಾರ್ಡ್ ಮತ್ತು ಪಿನ್ ನಂಬರ್ ಪಡೆದುಕೊಂಡು ಅವರಿಗೆ ಮೋಸದಿಂದ ನಕಲಿ ಎಟಿಎಂ ಕಾರ್ಡ್ ನೀಡಿ, ನಂತರ ಎಟಿಎಂ ಕಾರ್ಡ್‌ನಲ್ಲಿದ್ದ ಹಣ ಡ್ರಾ ಮಾಡಿಕೊಂಡು ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಇದೇ ರೀತಿಯ ಕೃತ್ಯಗಳನ್ನು ರಾಜ್ಯದ ಕೋಲಾರ, ಕೆ.ಜಿ.ಎಫ್., ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಯ ವಿವಿಧ ಪೋಲಿಸ್ ಠಾಣಾ ಸರಹದ್ದಿನಲ್ಲಿ ಎಟಿಎಂ ಬಳಿ ಹಣ ಡ್ರಾ ಮಾಡುತ್ತಿದ್ದ ಸಾರ್ವಜನಿಕರಿಂದ ಎಟಿ.ಎಂ.ಕಾರ್ಡ್‌ಗಳೊಂದಿಗೆ ಪಿನ್ ನಂಬರ್ ಪಡೆದು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಮತ್ತು ಪಿನ್ ನಂಬರ್ ಪಡೆದುಕೊಂಡು ಹಣ ಡ್ರಾ ಮಾಡಿ ಸಾರ್ವಜನಿಕರಿಗೆ ಹಣ ಕೊಡದೆ ವಂಚನೆ ಮಾಡಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಪೋಲಿಸರು ತಿಳಿಸಿದ್ದಾರೆ.