ಎಚ್ 3ಎನ್2 ಆತಂಕ ಬೇಡ ಜಾಗೃತಿ ಇರಲಿ : ಡಾ.ಸುರೇಶ್ ಮೇಕಿನ್

ಕಲಬುರಗಿ,ಮಾ,23:ರಾಜ್ಯದಲ್ಲಿ ಇಲ್ಲಿಯವರೆಗೂ ಇನ್ಫ್ಲುಯೆಂಜ ಎಚ್3ಏನ್2 ವೈರಸ್‍ದಿಂದ ಎರಡು ಸಾವುಗಳು ಸಂಭವಿಸಿದ್ದು ಕೋವಿಡ್‍ನಂತೆ ಇದು ಗಂಭೀರವಾಗಿಲ್ಲದಿದ್ದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಕಲಬುರಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೇಕ್ಷಣ ಅಧಿಕಾರಿ ಡಾ.ಸುರೇಶ್ ಮೇಕಿನ್ ಅವರು ತಿಳಿಸಿದರು.
ಕಲಬುರಗಿ ಆಕಾಶವಾಣಿಯಲ್ಲಿ ಮಾರ್ಚ್ 22 ರಂದು ಜೊತೆ ಜೊತೆಯಲಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೇವಲ ಒಂದು ಪ್ರಕರಣ ದಾಖಲಾಗಿದ್ದು, ಆ ರೋಗಿ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಪ್ರತಿ ವಾರಕ್ಕೆ 50 ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿದ್ದು, ಕೆಮ್ಮು , ನೆಗಡಿ, ಜ್ವರ, ತಲೆನೋವು, ಶೀತ ಇವು ರೋಗದ ಲಕ್ಷಣಗಳಾಗಿವೆ.ಕೋವಿಡ್ ಸಂದರ್ಭದಲ್ಲಿ ಪಾಲಿಸಿದ ಶಿಸ್ತಿನ ಜೀವನಶೈಲಿ ನಡೆಸುವುದರಿಂದ ಎಚ್ 3ಎನ್2ವೈರಸ್ ಹರಡುವುದನ್ನು ಸಮರ್ಪಕವಾಗಿ ತಡೆಗಟ್ಟಬಹುದಾಗಿದೆ. ಈ ರೋಗದ ಲಕ್ಷಣಗಳು ಐದರಿಂದ ಏಳು ದಿನಗಳಲ್ಲಿ ಕಮ್ಮಿಯಾಗಿ ರೋಗಿಯು ಸಂಪೂರ್ಣವಾಗಿ ಗುಣಮುಖವಾಗುತ್ತಾನೆ. ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜಾಗೃತಿ ವಹಿಸುವುದು ಅನಿವಾರ್ಯವಾಗಿರುತ್ತದೆ. ಕೋವಿಡ್ ಲಸಿಕೆ ಪಡೆದವರಿಗೂ ಕೂಡ ಈ ವೈರಸ್ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇನ್ಫ್ಲುಯೆಂಜ ಸತತವಾಗಿ ರೂಪಾಂತರಗೊಳ್ಳುವುದರಿಂದ ಯಾವುದೇ ವ್ಯಾಕ್ಸಿನ್ ಇದಕ್ಕೆ ಲಭ್ಯವಿರುವುದಿಲ್ಲ. ಎಚ್3ಎನ್2ವೈರಸ್ ವೈರಸ್ ಪತ್ತೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಕೇಂದ್ರದ ಪ್ರಮುಖ ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಯಾವುದೇ ರೀತಿಯಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡುವುದರಿಂದ ಈ ಬಗೆಯ ರೋಗಗಳಿಂದ ದೂರವಿರಬಹುದು ಎಂದು ಮಾಹಿತಿಯನ್ನು ಹಂಚಿಕೊಂಡರು.
ವೈಜಾಪುರದ ವಾಸುದೇವ ಪಾಟೀಲ್, ಸುರಪುರದ ರಾಘವೇಂದ್ರ ಭಕ್ರಿ, ಕಲಬುರ್ಗಿಯ ಶ್ಯಾಮಲಾ ಸ್ವಾಮಿ, ಗೋಪಾಲ, ಶಿವಕುಮಾರ ಸ್ವಾಮಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲಿಕಾರ್ಜುನ್, ಅಫ್ಜಲ್ ಪುರದ ಸಿದ್ದರಾಮ ಕಂಬಾರ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಸಂಗಮೇಶ್ ಅವರು ನಡೆಸಿಕೊಟ್ಟರು. ಮಧು ದೇಶಮುಖ್, ನೀರಜಾ ಕಾರಟಗಿ, ಸುಗುಲರಾಣಿ ನೆರವು ನೀಡಿದರು.ಫೆಭಿ ಶೇಖರ್.ತಾಂತ್ರಿಕ ನೆರವು ನೀಡಿದರು.