
ಕಲಬುರಗಿ:ಮೇ.23: ಹಿರಿಯ ಶಾಸಕರು, ದಲಿತ ಸಮುದಾಯದ ಮುತ್ಸದ್ದಿ ರಾಜಕಾರಣಿ ಡಾ.ಎಚ್ ಸಿ ಮಹಾದೇವಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಅಖಿಲ ಕರ್ನಾಟಕ ಎಚ್ ಸಿ ಮಹಾದೇವಪ್ಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಓಂಕಾರ ವಠಾರ(ಕೆರಿಬೋಸಗಾ) ಅವರು ಸರಕಾರಕ್ಕೆ ಮನವಿ ಮಾಡಿಕೊಂಡರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಡಾ.ಎಚ್ ಸಿ ಮಹಾದೇವಪ್ಪ ನವರು ಸಿದ್ದರಾಮಯ್ಯ ನವರ ನಾಯಕತ್ವವನ್ನು ಒಪ್ಪಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ,ಮೂರು ಬಾರಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಅವರು ಕಳೆದ ಐದು ವರ್ಷಗಳಿಂದ ಬುದ್ದ ಮತ್ತು ಅಂಬೇಡ್ಕರ್ ತತ್ವ ಚಿಂತನೆ ಹಾಗೂ ವಿಚಾರಗಳಲ್ಲಿ ಹೆಚ್ಚು ಧ್ಯಾನಶೀಲರಾಗಿದ್ದು, ಜ್ಞಾನಶೀಲರೂ ಪ್ರಬುದ್ಧಶೀಲರೂ ಆಗಿದ್ದಾರೆ.ಹೀಗಾಗಿ ಡಾ.ಎಚ್ ಸಿ ಮಹಾದೇವಪ್ಪ ಅವರ ಆಡಳಿತಾತ್ಮಕ ಸೇವೆ ಕನ್ನಡಿಗರಿಗೆ ಲಭಿಸಬೇಕಿರುವುದರಿಂದ ಅವರಿಗೆ ತಮ್ಮ ಸರಕಾರದಲ್ಲಿ ಮಂತ್ರಿಸ್ಥಾನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.