ಎಚ್.ಬಿ.ಪಾಟೀಲ್‍ರಿಗೆ ಬುದ್ಧ-ಬಸವ-ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ಮೇ.19: ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡು, ಸಮಾಜಮುಖಿಯಾದ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಉಪನ್ಯಾಸಕ, ಸಮಾಜ ಸೇವಕ ಹಾಗೂ ಶರಣ ಚಿಂತಕ ಎಚ್.ಬಿ.ಪಾಟೀಲ ಅವರಿಗೆ ಬುದ್ಧ-ಬಸವ-ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ದೊರೆತಿದೆ.
ನಗರದ ಕನ್ನದ ಭವನದ ಸುವರ್ಣ ಸಭಾ ಭವನದಲ್ಲಿ ‘ಜೈ ಕನ್ನಡಿಗರ ರಕ್ಷಣಾ ವೇದಿಕೆ’ ಮತ್ತು ‘ಸನರೈಸ್ ಆಸ್ಪತ್ರೆ’ ವತಿಯಿಂದ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನದಿ ಸಿನ್ನೂರನ ಪೂಜ್ಯ ಗುರುರಾಜೇಂದ್ರ ಶಿವಯೋಗಿಗಳು, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಸುರೇಶ್ ಎಲ್.ಶರ್ಮಾ, ಸನರೈಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ಸಲ್ಮಾನ್ ಪಟೇಲ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮುಖಂಡರಾದ ನೀಲಕಂಠರಾವ ಮುಲಗೆ, ಚಂದ್ರಿಕಾ ಪರಮೇಶ್ವರ, ಸಚಿನ್ ಫರತಾಬಾದ್, ಮಂಜುನಾಥ ನಾಲವಾರಕರ್, ರವಿ ದೇಗಾಂವ, ಮಲ್ಲಿಕಾರ್ಜುನ ನೀಲೂರ್ ಸೇರಿದಂತೆ ಇತರರು ಹಾಜರಿದ್ದರು.