ಎಚ್.ಡಿ.ಕೆ ಮೊದಲು ತಮ್ಮ ಕುಟುಂಬ ಸರಿಮಾಡಿಕೊಳ್ಳಲಿ: ಜೋಶಿ ಕುಟುಕು


ಹುಬ್ಬಳ್ಳಿ, ಫೆ 26: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮೊದಲು ತಮ್ಮ ಕುಟುಂಬ ಸರಿ ಮಾಡಿಕೊಳ್ಳಲಿ, ನಂತರ ರಾಜ್ಯ ಆಳಲು ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡಿದಾಟ ಸಾಮಾನ್ಯ. ಕುಮಾರಸ್ವಾಮಿಯವರು ಮೊದಲು ಮನೆಯನ್ನು ನಿರ್ವಹಿಸಲಿ, ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.
ಒಂಭತ್ತು ವರ್ಷಗಳಿಂದಲೂ ತೃತೀಯ ಶಕ್ತಿಯನ್ನು ರೂಪಿಸುವ ಯತ್ನ ನಡೆಯುತ್ತಿದೆ. ಆದರೆ ಅವರಲ್ಲಿ ಒಗ್ಗಟ್ಟು ಹಾಗೂ ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಅದು ಸಾಧ್ಯವಾಗುತ್ತಿಲ್ಲ. ಉದಾತ್ತ ಮನೋಭಾವವಿದ್ದರೆ ತೃತೀಯ ರಂಗ ನಿರ್ಮಾಣವಾಗುತ್ತಿತ್ತು. ಆದರೆ ಅದು `ಮೂರನೇ ದರ್ಜೆ’ ರಂಗವಾಗಿ ಹೊರಹೊಮ್ಮಲಿದೆ ಎಂದು ಟೀಕಿಸಿದ ಅವರು ಭಾರತ ಜಗತ್ತಿನ ದೊಡ್ಡಣ್ಣ ಆಗಬೇಕು, ಭಾರತ ಜಗನ್ಮಾತೆಯಾಗಬೇಕು ಎನ್ನುವ ಕಲ್ಪನೆ ಜಿಜೆಪಿಯಲ್ಲಿರುವುದರಿಂದ ಒಮ್ಮೆಯೂ ನಮ್ಮಲ್ಲಿ ಒಡಕಾಗಿಲ್ಲ ಎಂದು ನುಡಿದರು.
ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಎಲ್ಲ ಮಠಾಧೀಶರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯಾರು ಯಾವ ಅರ್ಥದಲ್ಲಿ ಮಠಾಧೀಶರ ಕುರಿತು ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಜೋಶಿ ಹೇಳಿದರು.
ರಾಹುಲ್ ಗಾಂಧಿಗೆ ಭಾರತ ಮತ್ತು ಇಲ್ಲಿನ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ಕುರಿತು ಆಗಾಗ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದು ಅವರು ಛೇಡಿಸಿದರು.