ಎಚ್ ಎ ಎಲ್ ನಿಂದ 48 ಸಾವಿರ ಕೋಟಿ ರೂ. ಮೊತ್ತದ 83 ತೇಜಸ್ ಖರೀದಿಗೆ ಕೇಂದ್ರ ಒಪ್ಪಿಗೆ

ನವದೆಹಲಿ,ಜ. 13- ಭಾರತೀಯ ವಾಯುಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್- ಎಚ್‍ಎಎಲ್‍ನಿಂದ 48 ಸಾವಿರ ಕೋಟಿ ರೂಪಾಯಿ ಮೊತ್ತದ 83 ಲಘು ಯುದ್ಧ ವಿಮಾನ – ತೇಜಸ್, ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ರಕ್ಷಣೆ ಕುರಿತ ಸಚಿವ ಸಂಪುಟ ಸಮಿತಿ ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಸಂಗ್ರಹಣೆಯಿಂದಾಗಿ ಭಾರತೀಯ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಲಘು ಯುದ್ಧ ವಿಮಾನ ತೇಜಸ್, ಭಾರತೀಯ ವಾಯುಪಡೆಗೆ ಕಳೆದ ಹಲವು ವರ್ಷಗಳಿಂದ ಬೆನ್ನೆಲುಬಾಗಿ ನಿಂತಿದೆ. ಹೊಸ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಹೇಳಿದ್ದಾರೆ.

ಎಚ್‍ಎಎಲ್ ಈಗಾಗಲೇ ಬೆಂಗಳೂರು ವಿಭಾಗ ಮತ್ತು ನಾಸಿಕ್‍ನಲ್ಲಿ ಎರಡನೇ ಹಂತದ ಉತ್ಪಾದನಾ ಘಟಕಗಳನ್ನು ಆರಂಭಿಸಿವೆ ಎಂದು ಹೇಳಿದ ಅವರು, ಎಚ್‍ಎಎಲ್ ಲಘು ಯುದ್ಧ ವಿಮಾನ –ಎಂಕೆ-1ಎ ಉತ್ಪಾದನೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಲಘು ಯುದ್ಧ ವಿಮಾನ ಒಪ್ಪಂದದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿದೆ. ಪರಿಸರ ಸ್ನೇಹಿ ಉತ್ಪಾದನೆ ಮತ್ತು ಆತ್ಮನಿರ್ಭರ ಭಾರತ್ ಅಡಿಯಲ್ಲಿ ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುವ ಜೊತೆಗೆ ದೇಶೀಯ ಉತ್ಪಾದನೆಗೂ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಎಚ್‍ಎಎಲ್‍ಗೆ ಲಘು ಯುದ್ಧ ವಿಮಾನ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿರುವುದು ದೇಶೀಯವಾಗಿ ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ದೇಶದ ರಕ್ಷಣಾ ಕ್ಷೇತ್ರ ಬಲಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಎಂಎಸ್‍ಎಂಇಗಳು ಸೇರಿದಂತೆ 500ಕ್ಕೂ ಹೆಚ್ಚು ದೇಶೀಯ ಕಂಪನಿಗಳು ಎಚ್‍ಎಎಲ್‍ನೊಂದಿಗೆ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಕೈಜೋಡಿಸಿದೆ ಎಂದು ಹೇಳಿದ್ದಾರೆ.