ಎಚ್.ಆರ್ ಚೆನ್ನಕೇಶವ ಜೆಡಿಎಸ್ ಗೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.31: ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದ ಮಾಜಿ ಸಂಸದ ಹೆಚ.ಜಿ ರಾಮುಲು ಕಿರಿಯ ಪುತ್ರ ಎಚ್.ಆರ್.ಚೆನ್ನಕೇಶವ ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಮಾಜಿ ಸಿ.ಎಂ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
2014 ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಾ ಬಂದಿದ್ದ ಚನ್ನಕೇಶವ 2018ರಲ್ಲಿ ಬಿಜೆಪಿ ಟಿಕಿಟ್ ಪಡೆಯಲು ಹರಸಾಹಸ ನಡೆಸಿ ವಿಫಲರಾಗಿದ್ದು. ಬಿಜೆಪಿ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಬಿಜೆಪಿಯಲ್ಲಿ ಮುಂದುವರೆದಿದ್ದರು. ಇತ್ತೀಚಿನ ದಿನಗಳಲ್ಲಿ ಸಿ.ಎಂ ಕಾರ್ಯಕ್ರಮ ಸೇರಿದಂತೆ ಇತರೆ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿಯೂ ಮಾಹಿತಿ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು. ಮುಂಬರುವ ವಿಧಾನಸಭಾ  ಚುನಾವಣೆಯಲ್ಲಿ ಬಿಜೆಪಿ ಟಿಕಿಟ್ ಪಡೆಯಲು ಮುಂದಾಗಿದ್ದರು, ಆದರೆ ಯಾವುದೇ ಮುಖಂಡರು ಸ್ಪಂದಿಸಲಿಲ್ಲ. ಸ್ಥಳೀಯ ಮುಖಂಡರ ವರ್ತನೆಗೆ ಬೇಸತ್ತು ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಮಾಜಿ ಸಿ.ಎಂ ಕುಮಾರಸ್ವಾಮಿ ಗಮನಿಸಿ, ದೂರವಾಣಿ ಕರೆ ಮೂಲಕ ಬೆಂಗಳೂರಿಗೆ ಕರೆತಂದು ಮಾತುಕತೆ ಮಾಡಿ, ಪಕ್ಷಕ್ಕೆ ಸ್ವಾಗತಿಸಿ ಪಕ್ಷದಿಂದ ಸ್ಪರ್ಧಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಮಾಜಿ ಸಿ.ಎಂ ಕುಮಾರಸ್ವಾಮಿಯರು ಭರವಸೆ ನೀಡಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.  2023ರ ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲಿದ್ದು, ಸಧ್ಯದಲ್ಲೇ ಘೋಷಣೆ ಮಾಡಲಿದ್ದಾರೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಕಾರ್ಯಕ್ರಮ, ರಾಜ್ಯ ಮುಖಂಡರ ಭೇಟಿ ಸಂದರ್ಭದಲ್ಲಿ ಮಾಹಿತಿ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನ ಮಾನ ದೊರೆಯುತ್ತಿಲ್ಲ. ಮುಖಂಡರ ಈ ವರ್ತನೆಯಿಂದ ಜೆಡಿಎಸ್ ಗೆ ಹೋಗಿದ್ದಾಗಿ ತಿಳಿಸಿದ್ದಾರೆ.