ಎಚ್‌ಡಿಎಫ್‌ಸಿ ವಿಮೆ ಶೇ. ೧೭ ರಷ್ಟು ಹೆಚ್ಚಳ

ಬೆಂಗಳೂರು.ಏ.೨೯- ಜೀವವಿಮೆ ಕಂಪನಿ ಎಚ್‌ಡಿಎಫ್‌ಸಿ ಲೈಫ್, ಮಾರ್ಚ್ ೩೧ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿನ ಹಣಕಾಸು ಫಲಿತಾಂಶ ಪ್ರಕಟಿಸಿದ್ದು ಹೊಸ ವಹಿವಾಟಿನ ಪ್ರೀಮಿಯಂ ಮಾರ್ಚ್ ೩೧ರ ವೇಳೆಗೆ ಶೇ ೧೭ರಷ್ಟು ಹೆಚ್ಚಳಗೊಂಡು ರೂ ೨೦,೧೦೭ ಕೋಟಿಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಇದು ರೂ ೧೭,೨೩೯ ಕೋಟಿಗಳಷ್ಟಿತ್ತು. ಜೀವವಿಮೆ ಪಾಲಿಸಿಗಳ ನವೀಕರಣ ಪ್ರೀಮಿಯಂ ಮೊತ್ತವು ಹಿಂದಿನ ವರ್ಷದ ಇದೇ ಅವಧಿಯಲ್ಲಿನ ರೂ ೧೫,೪೬೮ ಕೋಟಿಗೆ ಹೋಲಿಸಿದರೆ ೨೦೨೧ ಮಾರ್ಚ್ ೩೧ರ ವೇಳೆಗೆ ರೂ ೧೮,೪೭೭ ಕೋಟಿಗಳಿಗೆ ಏರಿಕೆಯಾಗಿದೆ.

ಎಚ್‌ಡಿಎಫ್‌ಸಿ ಲೈಫ್ ಸುಮಾರು ೯.೮ ಲಕ್ಷದಷ್ಟು ಹೊಸ ವೈಯಕ್ತಿಕ ಪಾಲಿಸಿಗಳನ್ನು ಮಾರಾಟ ಮಾಡಿದ್ದು ಶೇ ೧೦ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ವಿಮಾ ಸಂಸ್ಥೆಯ ನಿರ್ದೇಶಕಿ ಮತ್ತು ಸಿಇಒ ಶ್ರೀಮತಿ ವಿಭಾ ಪಡಲ್ಕರ್ ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಲೈಫ್, ೨೦೨೦-೨೧ರ ಹಣಕಾಸು ವರ್ಷದಲ್ಲಿ ವೈಯಕ್ತಿಕ ಪಾಲಿಸಿಗಳ ರೂಪದಲ್ಲಿ ಸ್ವೀಕರಿಸಿದ ಪ್ರೀಮಿಯಂ ಅದಕ್ಕೂ ಹಿಂದಿನ ವರ್ಷದ ಶೇ ೧೯ರ ಮೂಲ ಬೆಳವಣಿಗೆ ಮೇಲೆ ಶೇ ೧೭ರಷ್ಟು ದಾಖಲೆ ಪ್ರಮಾಣದ ಬೆಳವಣಿಗೆ ಕಂಡಿದೆ.

ಈ ವಿಭಾಗದಲ್ಲಿ ಖಾಸಗಿ ವಲಯದ ವಹಿವಾಟು ೨೦೧೯-೨೦ನೇ ಹಣಕಾಸು ವರ್ಷದ ಶೇ ೫ರ ಮೂಲ ಬೆಳವಣಿಗೆ ಮೇಲೆ ಶೇ ೮ರಷ್ಟು ಮಾತ್ರ ಪ್ರಗತಿ ಕಂಡಿದೆ. ಇದಕ್ಕೆ ಹೋಲಿಸಿದರೆ ಎಚ್‌ಡಿಎಫ್‌ಸಿ ಲೈಫ್‌ನ ವಹಿವಾಟು ಗರಿಷ್ಠ ಹೆಚ್ಚಳ ಸಾಧಿಸಿದೆ.