ಎಚ್೩ಎನ್೨ಗೆ ಇಬ್ಬರು ಬಲಿ

ಬೆಂಗಳೂರು/ ನವದೆಹಲಿ, ಮಾ.೧೦- ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಇತ್ತೀಚೆಗೆ ಜನರಲ್ಲಿ ಆತಂಕ ಸೃಷ್ಟಿಸಿರುವ ಎಚ್೩ಎನ್೨ ವೈರಸ್ ಸೋಂಕು ೯೦ ಮಂದಿಯಲ್ಲಿ ಕಾಣಿಸಿಕೊಂಡು ಭಯದ ವಾತಾವರಣ ಮೂಡಿಸಿದೆ. ಕರ್ನಾಟಕ ಮತ್ತು ಹರಿಯಾಣದಲ್ಲಿ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದು ಸಹಜವಾಗಿ ಮತ್ತಷ್ಟು ಹೆಚ್ಚು ಆತಂಕ ಸೃಷ್ಟಿಸಿದೆ.ಹಾಸನದಲ್ಲಿ ೮೨ ವರ್ಷದ ಹಿರೇಗೌಡ ಎಚ್೩ ಎನ್೨ ನಿಂದ ಮಾರ್ಚ್ ೧ ರಂದು ಮೃತಪಟ್ಟಿರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ.ಫೆ.೨೪ ರಂದು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ ೧ ರಂದು ಮೃತಪಟ್ಡಿದ್ದರು. ಈ ಕುರಿತು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಹಾಸನ ಜಿಲ್ಲೆಯೊಂದರಲ್ಲಿ ೬ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ೫೦ ಎಚ್ ೩ ಎನ್ ೨ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷೆ :
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿವಾರ ೨೫ ಮಂದಿಗೆ ವಿವಿಧ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.ಗರ್ಭಿಣಿಯರು, ಹಿರಿಯ ನಾಗರಿಕರು ಹೆಚ್ಚು ಸೋಂಕಿಗೆ ಒಳಗಾಗುವುದರಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಹಾಸನದ ಆಲೂರು ತಾಲ್ಲೂಕಿನಲ್ಲಿ ವೃದ್ದ ಸೋಂಕಿಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಆಲೂರು ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.
ಇನ್ನು ಹರಿಯಾಣದಲ್ಲಿ ಎಚ್೩ಎನ್ ೨ ವೈರಸ್‌ನಿಂದ ಉಂಟಾದ ಸೋಂಕು ಮತ್ತು ಇನ್ನಿತರೆ ಸಮಸ್ಯೆಗಳಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.
ದೇಶದಲ್ಲಿ ೯೦ ಪ್ರಕರಣ ಪತ್ತೆ
ದೇಶದಲ್ಲಿ ಇದುರೆಗೂ ಸುಮಾರು ೯೦ ಎಚ್೩ಎನ್೨ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ ಎಂಟು ಎಚ್೧ಎನ್೧ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಪತ್ತೆಯಾಗಿರುವ ವೃರಸ್ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.
ಎಚ್೩ಎನ್ ೨ ಸೋಂಕಿನಿಂದ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಳಲ್ಲಿ ಅದರಲ್ಲಿಯೂ ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಲ್ಲಿ ಮತ್ತಷ್ಟು ಆತಂಕ ಎದುರಾಗಿದ್ದು ಕಠಿಣ ಕ್ರಮ ಕೈಗೊಂಡಿವೆ.
ಎಚ್೩ಎನ್೨ ವೈರಸ್‌ನಿಂದ ಉಂಟಾಗುವ ಇನ್ಫ್ಲುಯೆನ್ಸ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ.
ಏನಿದು ಹಾಂಗ್ ಕಾಂಗ್ ಪ್ಲೂ :
ಎಚ್೩ಎನ್೨ ಸೋಂಕಿನಿಂದ ದೇಶದಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚಿನ ಸೋಂಕುಗಳು ಉಂಟಾಗುತ್ತವೆ, ಇದನ್ನು “ಹಾಂಗ್ ಕಾಂಗ್ ಫ್ಲೂ” ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದುವರೆಗೆ ಎಚ್೩ಎನ್೨ ಮತ್ತು ಎಚ್೧ಎನ್೧ ಸೋಂಕುಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.
ಈ ರೋಗ ರೋಗಲಕ್ಷಣ ಹೊಂದಿರುವ ಮಂದಿಯಲ್ಲಿ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಉಬ್ಬಸವನ್ನು ಒಳಗೊಂಡಿವೆ. ಜೊತೆಗೆ ರೋಗಿಗಳಲ್ಲಿ ವಾಕರಿಕೆ, ನೋಯುತ್ತಿರುವಿಕೆಯನ್ನು ಕಂಡು ಬಂದಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ರೋಗದಿಂದ ಗಂಟಲು, ದೇಹ-ನೋವು ಮತ್ತು ಅತಿಸಾರ. ರೋಗಲಕ್ಷಣಗಳು ಸುಮಾರು ಒಂದು ವಾರದವರೆಗೆ ಇರುತ್ತವೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ಗುಣಮುಖವಾಗಲಿದೆ. ನಿರ್ಲಕ್ಷ್ಯ ವಹಿಸಿದರೆ ಆಪತ್ತು ಖಚಿತ ಎಂದು ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ದೇಶದಲ್ಲಿ ಎಚ್೩ಎನ್೨ ಸೋಂಕಿಗೆ ಇಬ್ಬರು ಬಲಿ

ಕರ್ನಾಟಕ ಮತ್ತು ಹರಿಯಾಣದಲ್ಲಿ ತಲಾ ಒರ್ವ ವ್ಯಕ್ತಿ ಸಾವು

ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚಿದ ಆತಂಕ

ಇದುವರೆಗೆ ದೇಶದಲ್ಲಿ ೯೦ ಪ್ರಕರಣಗಳು ಪತ್ತೆ

ಸೋಂಕು ನಿವಾರಣೆಗೆ ಕರ್ನಾಟಕದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ

ಕಡ್ಡಾಯ ಮಾಸ್ಕ್ ಧರಿಸಲು ಸೂಚನೆ

ಆರೋಗ್ಯ ತಪಾಸಣೆಗೆ ಒತ್ತು
ಹಾಸನ ಜಿಲ್ಲೆಯಲ್ಲಿ ಎಚ್ ೩ ಎನ್ ೨ ಸೋಂಕಿಗೆ ವೃದ್ದ ಬಲಿಯಾಗಿರುವ ಹಿನ್ನೆಲೆಯಲ್ಲಿ ಆಲೂರು ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಹೆಚ್ಚಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅನಾರೋಗ್ಯ ಪೀಡಿತರು ಹಾಗೂ ಇತರ ಕಾಯಿಲೆಗಳು ಇರುವವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಧುಮೇಹ ಮುಂತಾದ ಕಾಯಿಲೆಗಳು ಹಾಗೂ ೬೦ ವರ್ಷ ಮೇಲಿನವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದ್ದು ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರನ್ನು ಭೇಟಿ ಮಾಡಲು ಸೂಚಿಸಲಾಗಿದೆ.
ವೈರಸ್ ಪತ್ತೆಯಾದ ಹಾಗೂ ಮೃತಪಟ್ಟ ವೃದ್ದರ ತೋಟದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ೧೪ ದಿನ ಸತತ ತಪಾಸಣೆ ಮಾಡುವ ಕುರಿತು ಸೂಚನೆ ಬಂದಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.