ಎಚ್೧ಬಿ ವೀಸಾದಲ್ಲಿ ಮಹತ್ವದ ಬದಲಾವಣೆ

ವಾಷಿಂಗ್ಟನ್, ಜ.೮- ಅಮೆರಿಕದಲ್ಲಿ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಕೆಲವೇ ದಿನಗಳು ಬಾಕಿ ಇರುವಾಗಲೇ ಎಚ್೧ ಬಿ ವೀಸಾದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಹೊಸ ನಿಯಮದಡಿ ಎಚ್-೧ಬಿ ಕ್ಯಾಪ್ ವೀಸಾಗಳನ್ನು ವೇತನದ ಮಟ್ಟಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ.
ವಾರ್ಷಿಕ್ ಎಚ್೧ಬಿ ಕ್ಯಾಪ್ ಲಾಟರಿ ವ್ಯವಸ್ಥೆ ಬದಲಿಗೆ ವೇತನ ಆಧಾರಿತ ಆಯ್ಕೆ ಪ್ರಕ್ರಿಯೆ ಜಾರಿಗೆ ಬಂದಿದೆ. ತಮ್ಮ ವೃತ್ತಿಗಳಲ್ಲಿ ಅತಿ ಹೆಚ್ಚು ಸಂಬಳಗಳನ್ನು ಪಡೆಯುವವರಿಗೆ ಹಾಗೂ ಉದ್ಯೋಗದ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ವೀಸಾಕ್ಕೆ ಆದ್ಯತೆ ನೀಡಲಾಗುತ್ತದೆ.
ಹೀಗಾಗಿ, ಎಚ್-೧ಬಿ ವೀಸಾಗಳನ್ನು ಅಮೆರಿಕದ ಕಂಪನಿಗಳ ಪ್ರಾಯೋಜಕತ್ವ ಹೊಂದಿರುವ ಲೆವೆಲ್ ೪ರಲ್ಲಿನ ಉದ್ಯೋಗಿಗಳಿಗೆ ಮೊದಲು ನೀಡಲಾಗುತ್ತದೆ. ಅಮೆರಿಕದಲ್ಲಿ ನಾಲ್ಕು ವೇತನ ವರ್ಗಗಳಿದ್ದು, ಅದರಲ್ಲಿ ಲೆವೆಲ್ ೪ ಅತಿ ಹೆಚ್ಚು ಸಂಬಳ ಹಾಗೂ ಅನುಭವ ಉಳ್ಳವರನ್ನು ಒಳಗೊಂಡಿರುತ್ತದೆ. ಬಳಿಕ ಲೆವೆಲ್ ೩ ಮತ್ತು ಉಳಿದ ಹಂತದಲ್ಲಿರುವ ಉದ್ಯೋಗಿಗಳಿಗೆ ನೀಡಲಾಗುತ್ತದೆ.
ಈ ಹೊಸ ನಿಯಮವು ಕೆಳಮಟ್ಟದ ವೇತನ ಮತ್ತು ಕಡಿಮೆ ಕೌಶಲದ ಹುದ್ದೆಗಳನ್ನು ತುಂಬಿಕೊಳ್ಳಲು ಎಚ್-೧ಬಿ ವೀಸಾ ಯೋಜನೆಯನ್ನು ಬಳಸಿಕೊಳ್ಳುವ ಮೂಲಕ ಉದ್ಯೋಗಿಗಳಿಗೆ ಭತ್ಯೆ ಒದಗಿಸುವ ಹಾಗೂ ಕಾನೂನು ದುರ್ಬಳಕೆ ಮಾಡುವ ಚಟುವಟಿಕೆಗಳನ್ನು ಕಡಿಮೆ ಮಾಡಲಿದೆ.
ಅಮೆರಿಕ ಚುನಾವಣೆಗಳು ಕೆಲವು ದಿನಗಳ ಮುನ್ನ ಟ್ರಂಪ್ ಆಡಳಿತ ಈ ಪ್ರಸ್ತಾಪ ಮುಂದಿರಿಸಿತ್ತು. ಅದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಈಗ ಅಂತಿಮ ನಿಯಮವನ್ನು ಪ್ರಕಟಿಸಲಾಗಿದ್ದು, ಇನ್ನು ೬೦ ದಿನಗಳಲ್ಲಿ ಜಾರಿಗೆ ಬರಲಿದೆ. ಆದರೆ ಇದನ್ನು ಹೊಸ ಆಡಳಿತ ರದ್ದುಗೊಳಿಸಲು ಅವಕಾಶವಿದೆ. ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿದೆ.