ಎಚ್‍ಡಿಕೆ ಹೇಳಿಕೆ ತಪ್ಪಾಗಿ ವ್ಯಾಖ್ಯಾನ: ಪ್ರೇಮಾಶಂಕರೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ಏ.17:- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಕ್ಷಣಿಕ ಭರವಸೆಗಳಿಗೆ ಮರುಳಾಗಬೇಡಿ ಎಂದು ಹೇಳಿದ್ದನ್ನೇ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಜೆಡಿಎಸ್ ನಗರ ಮಹಿಳಾ ಘಟಕದ ಅಧ್ಯಕ್ಷ ಎಸ್ ಪ್ರೇಮಾ ಶಂಕರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ, ಲಾಟರಿ ನಿಷೇಧ, ಸಾರಾಯಿ ನಿಷೇಧ ಮೂಲಕ ಮಹಿಳೆಯರ ಜೀವನ ಸುಧಾರಣೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಉತ್ತಮ ಭವಿಷ್ಯದಿಂದ ತಾಯಂದಿರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಬೇಸರದಿಂದ ಹೇಳಿದ್ದಾರೆ. ಇದರಲ್ಲಿ ಅನ್ಯ ವ್ಯಾಖ್ಯಾನಕ್ಕೆ ಅವಕಾಶವಿಲ್ಲ. ತಪ್ಪಿಲ್ಲದಿದ್ದರೂ ಅವರು ವಿಷಾಧಿಸಿದ್ದಾರೆ. ಆದರೂ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ತಮ್ಮ ಇರುವೆಕೆಯನ್ನು ಸಾಬೀತುಪಡಿಸಲು ಮಾಜಿ ಪ್ರಧಾನಿ ದೇವೇಗೌಡರ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮದ್ದೂರಿನ ಶಾಸಕ ಉದಯ್ ಅವರು ನೇರವಾಗಿಯೇ ಮಹಿಳೆಯರ ವಿರುದ್ಧ ಈ ಹಿಂದೆವಕೆಲ ಹೇಳಿಕೆಗಳನ್ನು ನೀಡಿದ್ದಾರೆ. ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಶೀಘ್ರದಲ್ಲಿ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಹಿಳಾ ಪ್ರಮುಖರಾದ ಲಕ್ಷ್ಮಿ ಶಿವಣ್ಣ, ಭಾಗ್ಯ ಮಾದೇಶ್, ಭಾಗ್ಯವತಿ, ಲಕ್ಷ್ಮಿ ಶಿವರಾಜ, ವೇದಾವತಿ ಮತ್ತು ಪ್ರಮೀಳಾ ಭರತ್ ಇದ್ದರು.