ಎಚ್‍ಡಿಕೆ ರಾಜ್ಯ ರಾಜಕಾರಣದ ಅತೃಪ್ತ ಪ್ರೇತಾತ್ಮ: ವೆಂಕಟೇಶ್

ಸಂಜೆವಾಣಿ ನ್ಯೂಸ್
ಮೈಸೂರು: ಜು.18:- ಕರ್ನಾಟಕ ರಾಜಕಾರಣದ ಅತೃಪ್ತ ಪ್ರೇತಾತ್ಮದಂತೆ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಕುಮಾರಸ್ವಾಮಿರವರು ರಾಜ್ಯದ ಜನರಿಂದ ತಿರಸ್ಕರಿಸಿಲ್ಪಟ್ಟ ನಂತರ ಬಿಜೆಪಿ ವರಿಷ್ಟರನ್ನು ಮೆಚ್ಚಿಸಿ ಕೇಂದ್ರ ಸಚಿವ ಇಲ್ಲವೇ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಪುಂಖಾನುಪುಂಖವಾಗಿ ಸುಳ್ಳು ಆರೋಪಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರಾದ ಎಚ್.ಎ.ವೆಂಕಟೇಶ್ ವ್ಯಂಗ್ಯವಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಜನತಾ ನ್ಯಾಯಾಲಯದಲ್ಲಿ ಜನರು ನೀಡಿದ ತೀರ್ಪಿನ ನಂತರ ತೀವ್ರ ಹತಾಶರಾಗಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿರವರು ಕಪೆÇೀಲಕಲ್ಪಿತ ಕಥೆಗಳು ಹಾಗೂ ಬಾಲಿಶ ಹೇಳಿಕೆಗಳ ಮೂಲಕ ಅಧಿಕಾರವಿಲ್ಲದೆ ನೀರಿನಿಂದ ಹೊರಬಂದ ಮೀನಿನ ರೀತಿ ಚಡಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಮಂತ್ರಿಗಳ ವಿರುದ್ಧ ವೈಯಕ್ತಿಕ ಜಿದ್ದಿಗೆ ಬಿದ್ದು ಟೀಕೆಗಳನ್ನು ಮಾಡುವ ಮೂಲಕ ತಾವು ಎಂತಹ ಅಪ್ರಬುದ್ಧ ನಾಯಕ ಎಂಬುದನ್ನು ಜಗಜಾಹೀರ ಗೊಳಿಸಿದ್ದಾರೆಂದರು.
ಸದಾ ಅಧಿಕಾರದ ಆಸೆಗೆ ಅವಕಾಶವಾದಿ ರಾಜಕಾರಣಕ್ಕೆ ಹೆಸರುವಾಸಿಯಾದ ಜೆಡಿಎಸ್ ಪಕ್ಷ ಪ್ರತಿ ಚುನಾವಣೆಯಲ್ಲಿ ಪ್ರಾದೇಶಿಕ ಆಸ್ಮಿತೆಯ ಬಗ್ಗೆ ಮಾತನಾಡುವ ನಾಯಕ ಕುಮಾರಸ್ವಾಮಿ ರವರು ಇಂದು ತಮ್ಮ ಅಧಿಕಾರದ ಲಾಲಸೆಗೆ ಮತೊಂದು ಮಜುಲಿಗೆ ಹೊರಳಿ ತಾವೊಬ್ಬ ಗೊಸುಂಬೆ ರಾಜಕಾರಣಿ ಎಂಬುದನ್ನು ರುಜುವಾತು ಮಾಡಿದ್ದು, ಅಧಿಕಾರದ ಬೆನ್ನು ಬಿದ್ದು ಬಿಜೆಪಿ ವರಿಷ್ಠರ ಮನೆಬಾಗಿಲು ಕಾಯುತ್ತಿರುವುದು ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜಕಾರಣಕ್ಕೆ ಭವ್ಯವಾದ ಇತಿಹಾಸವಿದ್ದು, ಹಲವು ದಿಗ್ಗಜ ನಾಯಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಹಲವು ಜನ ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಇಂದಿಗೂ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ. ಅಂತಹ ಪರಂಪರೆಯ ಕನ್ನಡ ನಾಡಿನ ನೆಲದಲ್ಲಿ ಅಧಿಕಾರದ ಹಪಹಪಿಗೆ ಬಿದ್ದಿರುವ ಕುಮಾರಸ್ವಾಮಿರವರು ತಾವು ಒಬ್ಬ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆತು ಕೀಳು ಮಟ್ಟದ ಬ್ಲಾಕ್ ಮೇಲ್ ತಂತ್ರದ ಮೂಲಕ ವಿಧಾನಸೌಧದ ಮುಂದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದರು.
ರಾಜ್ಯದ ವಿಧಾನಸೌಧ ನಿರ್ಮಿಸಿ ಜನಮಾನಸದಲ್ಲಿ ಸ್ಥಿರವಾದ ಸ್ಥಾನಗಳಿಸಿರುವ ಪ್ರಾಮಾಣಿಕ ರಾಜಕಾರಣದ ಕುರುಹು ಕೆಂಗಲ್ ಹನುಮಂತಯ್ಯರವರ ಪ್ರತಿಮೆ ಹಿಂದೆ ನಿಂತು ಹಳ್ಳಿಯ ಪೆಟ್ಟಿ ಅಂಗಡಿಯಲ್ಲೂ ದೊರೆಯುವ ಇನ್ನೂರು ರೂಪಾಯಿ ಪೆನ್ ಡ್ರೈವ್ ಜೇಬಿನಲ್ಲಿ ಇಟ್ಟುಕೊಂಡು ಇದರಲ್ಲಿ ಸರ್ಕಾರದ ಪ್ರತಿನಿಧಿಗಳ ಭ್ರಷ್ಟಾಚಾರದ ದಾಖಲಾತಿ ಇದೆ ಎಂದು ಬೊಗಳೆ ಬಿಡುತ್ತಿರುವ ಕುಮಾರಸ್ವಾಮಿರವರು ಯಾವ ದರ್ಜೆಯ ರಾಜಕಾರಣಿ ಎಂಬುದನ್ನು ಜನರೇ ತೀರ್ಮಾನಿಸಬೇಕಿದೆ ಎಂದರು.
ಕುಮಾರಸ್ವಾಮಿರವರ ತಂದೆ ಹೆಚ್. ಡಿ. ದೇವೇಗೌಡರವರು ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪರವರು ವಿಧಾನಸಭೆ ಅಧಿವೇಶನದಲ್ಲಿ ತಂದೆಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಅಂದಿನ ಶಾಸಕರು ದೇವೇಗೌಡರ ಸುಪುತ್ರರಾದ ಹೆಚ್. ಡಿ. ರೇವಣ್ಣರವರು ಕುಳಿತು ಮುಖ್ಯಮಂತ್ರಿಯ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಗುರುತರ ಆರೋಪ ಎದುರುಸಿದ ದೇವೇಗೌಡರು ಯಡಿಯೂರಪ್ಪರವರಿಗೆ ಆರೋಪವನ್ನು ರುಜುವಾತು ಮಾಡುವಂತೆ ಸವಾಲೆಸೆದು ಬಹುದೊಡ್ಡ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು. ಅಂತಹ ದೇವೇಗೌಡರ ಸುಪುತ್ರ ಇಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಅದೇ ಬಿಜೆಪಿ ನಾಯಕರ ನೆರಳಿಗೆ ಹಾತೊರೆಯುತ್ತಿರುವುದು ಹಾಸ್ಯಾಸ್ಪದವಾಗಿದೆ ದಯಮಾಡಿ ಕುಮಾರಸ್ವಾಮಿ ರವರು ತಮ್ಮ ತಂದೆಯಿಂದ ಸರಿಯಾದ ತಿಳುವಳಿಕೆ ಪಡೆದು ರಾಜಕಾರಣದಲ್ಲಿ ಮುನ್ನಡೆಯುವುದು ಒಳಿತು ಎಂಬ ಸಲಹೆ ನೀಡಿದರು.
ಮುಂದಿನ ಲೋಕಸಭೆಯ ಚುನಾವಣೆ ಮತ್ತು ಇನ್ನಿತರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿಲಿದ್ದು, ಸರಿಯಾದ ಕಪಾಳ ಮೋಕ್ಷ ಮಾಡಲಿದ್ದಾರೆ. ಇನ್ನು ಮುಂದೆಯಾದರೂ ಕುಮಾರಸ್ವಾಮಿ ಮುತ್ಸದ್ದಿಯಾಗಿ ರಾಜ್ಯದ ಒಳಿತಿಗೆ ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸಲಿ. ಇಲ್ಲವಾದರೇ ಮುಂದೆ ರಾಜ್ಯ ರಾಜಕಾರಣದ ಖಳನಾಯಕರಾಗಿ ಹೊರ ಹೊಮ್ಮಲ್ಲಿದ್ದು , ತಮ್ಮ ಅಪ್ರಬುದ್ದ ರಾಜಕೀಯ ನಿರ್ಧಾರಗಳಿಂದ ಮುಂದಿನ ದಿನಗಳಲ್ಲಿ ನಿಮ್ಮ ರಾಜಕೀಯ ಆತ್ಮಹತ್ಯೆಗೆ ಕಾರಣರಾಗುತ್ತಿರಿ ಎಂದು ಎಚ್ಚರಿಸ ಬಯಸುತ್ತೇವೆಂದರು.
ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಟಿ.ಎಸ್. ಸತ್ಯಾನಂದ ಹಾಗೂ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.