
ಮೈಸೂರು, ಅ. ೨೫- ಜೆಡಿಎಸ್ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಕುಮಾರಸ್ವಾಮಿ ಖಾಲಿ ಡಬ್ಬ ಇದ್ದಂತೆ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಹಾಗೆ ಹತಾಶರಾಗಿ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸರ್ಕಾರ ಬೀಳುವ ಸಂದರ್ಭದಲ್ಲಿ ಕುಮಾರಸ್ವಾಮಿ ಅಮೆರಿಕಾ ಪ್ರವಾಸದಲ್ಲಿದ್ದರು. ಅವರು ಅಧಿಕಾರದಲ್ಲಿದ್ದ ಒಂದು ವರ್ಷ ಎರಡು ತಿಂಗಳು ಪೂರ್ಣ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದರು. ಶಾಸಕರನ್ನಾಗಲಿ, ಸಚಿವರನ್ನಾಗಿ ಭೇಟಿ ಮಾಡಲಿಲ್ಲ. ಹೀಗಿರುವಾಗ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುವುದು ಅರ್ಥವಿಲ್ಲದ್ದು. ರಾಜಕೀಯ ಹತಾಶೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಶ್ವಾಸ ಮತ ಕೋರಿದ್ದ ಸಂದರ್ಭದಗಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಈ ಸರ್ಕಾರ ಬೀಳಲು ಬಿಜೆಪಿಯೇ ಕಾರಣ ಎಂದು ವಿಧಾನಸಭೆಯಲ್ಲಿ ಹೇಳಿದ ದಾಖಲೆ ಇದೆ. ಬೇಕಾದರೆ ಈ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ ಅವರು, ಈಗ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ವಿಧಾನಸಭೆಯನ್ನೇ ತಪ್ಪುದಾರಿಗೆ ಎಳೆದಂತೆ ಎಂದು ಹರಿಹಾಯ್ದರು.
ಬಿಜೆಪಿಯವರಿಗಿಂತ ಕುಮಾರಸ್ವಾಮಿ ಹೆಚ್ಚು ರಾಜಕೀಯವಾಗಿ ಹತಾಶರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲಲು ಆಗಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಇವರ ಮೈತ್ರಿ ಕುರುಡ-ಎಳವನ ಮೈತ್ರಿಯಂತೆ ಎಂದು ವ್ಯಂಗ್ಯವಾಡಿದ ಅವರು, ಅವರ ಮೇಲೆ ಇವರು ಅವಲಂಬಿತರಾಗಿದ್ದಾರೆ, ಇವರ ಮೇಲೆ ಅವರು ಅವಲಂಬಿತರಾಗಿದ್ದಾರೆ ಎಂದು ಗೇಲಿ ಮಾಡಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ವಿಲನ್ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮಿಸ್ಟರ್ ಕುಮಾರಸ್ವಾಮಿಯೇ ರಾಜಕೀಯ ವಿಲನ್ ಎಂದು ತಿರುಗೇಟು ನೀಡಿದರು.ಕುಮಾರಸ್ವಾಮಿ ಏನೆನೋ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡಲ್ಲ. ಖಾಲಿ ಡಬ್ಬ ಜಾಸ್ತಿ ಶಬ್ದ ಮಾಡುತ್ತದೆ. ತುಂಬಿದ ಕೊಡ ತುಳುಕಲ್ಲ ಎಂದು ಸಿದ್ಧರಾಮಯ್ಯ ಮಾರ್ಮಿಕವಾಗಿ ಹೇಳಿದರು.
ಬಿಜೆಪಿಗೆ ನೈತಿಕತೆ ಇಲ್ಲ
ತಮ್ಮ ಸರ್ಕಾರವನ್ನು ಎಟಿಎಂ ಭ್ರಷ್ಟ ಸರ್ಕಾರ ಎಂದಿರುವ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿಗಳು, ಆಪರೇಷನ್ ಕಮಲ ನಡೆಸಿ ಶಾಸಕರಿಗೆ ೨೫ ಕೋಟಿ ರೂ. ಕೊಟ್ಟು, ಅವರಿಂದ ರಾಜೀನಾಮೆ ಕೊಡಿಸಿ ಅವರ ಉಪಚುನಾವಣೆಗೂ ೨೫ ಕೋಟಿ ರೂ. ನೀಡಿದ ಬಿಜೆಪಿಯವರಿಗೆ ನಮ್ಮ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಅವರಿಗೆ ಮಾನ, ಮರ್ಯಾದೆ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಲೂಟಿ ಮಾಡಿ ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ರಾಜ್ಯದ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ಕಾರಣ. ವಿದ್ಯುತ್ ಕ್ಷಾಮಕ್ಕೂ ಬಿಜೆಪಿಯವರೇ ಕಾರಣ ಅವರ ಅವಧಿಯಲ್ಲಿ ಒಂದೂ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೂ ಕ್ರಮ ಆಗಲಿಲ್ಲ ಎಂದರು.
ರಾಜ್ಯ ಸರ್ಕಾರ ವಿದ್ಯುತ್ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಂಡಿದೆ. ವಿದ್ಯುತ್ ಖರೀದಿಗೆ ಮುಂದಾಗಿದೆ. ಇಂದಿನಿಂದ ಸಕ್ಕರೆ ಕಾರ್ಖಾನೆಗಳು ಸಹ ಉಪಉತ್ಪನ್ನವಾಗಿ ವಿದ್ಯುತ್ ಉತ್ಪಾದಿಸುತ್ತಿದ್ದು, ಅದನ್ನು ನಾವೇ ಖರೀದಿಸುತ್ತೇವೆ. ವಿದ್ಯುತ್ ಅಭಾವ ಮುಂದೆ ಸರಿಹೋಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದ ಆರ್ಥಿಕ ಪರಿಸ್ಥಿತಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿಧಾನಸಭೆಯಲ್ಲಿ ಶ್ವೇತ ಪತ್ರ ಮಂಡಿಸುತ್ತೇನೆ. ರಾಜ್ಯವನ್ನು ಹಾಳು ಮಾಡಿ ಜನರಿಂದ ತಿರಸ್ಕಾರಗೊಂಡಿರುವ ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಕನಕಪುರ ಬೆಂಗಳೂರಿಗೆ ಸೇರ್ಪಡೆ ಚರ್ಚೆಯಾಗಿಲ್ಲ
ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಡಿ.ಕೆ. ಶಿವಕುಮಾರ್ ನನ್ನ ಜತೆ ಚರ್ಚಿಸಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಮೈಸೂರು ದಸರಾ ಬಗ್ಗೆ ಸಂತಸ
ಹತ್ತು ದಿನಗಳ ಕಾಲ ಮೈಸೂರು ದಸರಾ ತುಂಬಾ ಚೆನ್ನಾಗಿ ನಡೆದಿದೆ. ಜನ ಖುಷಿಪಟ್ಟಿದ್ದಾರೆ, ಆನಂದಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಸರಾ ಶಾಂತಿಯುವತಾಗಿ ಯಾವುದೇ ಸಣ್ಣ ಅಹಿತಕರ ಘಟನೆಯಾಗದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಸ ವ್ಯಕ್ತಪಡಿಸಿದರು.
ಅಧಿಕಾರಿಗಳು ಒಂದು ತಂಡವಾಗಿ ಹಾಗೂ ಎಲ್ಲ ಶಾಸಕರು, ಸಂಸದರ ಸಹಕಾರದಿಂದ ಮೈಸೂರು ದಸರಾ ಉತ್ತಮವಾಗಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಖುದ್ಧು ಆಸಕ್ತಿ ವಹಿಸಿ ದಸರಾವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗರಿಕರ ಅಭಿಪ್ರಾಯ ಪಡೆದು ಬದಲಾವಣೆ
ಮೈಸೂರು ದಸರಾ ಆಚರಣೆಯಲ್ಲಿ ಬದಲಾವಣೆಗಳಾಗಬೇಕು ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ದಸರಾ ನಾಡಹಬ್ಬ ಜನರ ಹಬ್ಬ. ಇದರಲ್ಲಿ ಯಾವುದೇ ಬದಲಾವಣೆಗಳಾಗಬೇಕಾದರೂ ನಾಗರಿಕರ ಅಭಿಪ್ರಾಯ ಮುಖ್ಯ. ಅವರ ಅಭಿಪ್ರಾಯ ಪಡೆದೇ ಬದಲಾವಣೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಜನರ ಅಭಿಪ್ರಾಯ ಪಡೆಯದೇ ಬದಲಾವಣೆ ಬಗ್ಗೆ ತೀರ್ಮಾನಿಸುವುದು ಸರಿ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.