ಎಚ್‌ಡಿಕೆ ಕಿಂಗ್ ಆಫ್ ಬ್ಲಾಕ್‌ಮೇಲ್

ಬೆಂಗಳೂರು, ಮೇ ೮- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕಿಂಗ್ ಆಫ್ ಬ್ಲಾಕ್‌ಮೇಲ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರವರ ಪೆನ್‌ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಯವರಿಗೆ ಮೊದಲೇ ಗೊತ್ತಿತ್ತು. ಪೆನ್‌ಡ್ರೈವ್‌ನ ಕಥಾನಾಯಕ, ನಿರ್ಮಾಪಕ, ನಿರ್ದೇಶಕ ಎಲ್ಲವೂ ಕುಮಾರಸ್ವಾಮಿ ಎಂದು ಟೀಕಿಸಿದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಬೇಕಂತೆ. ಪ್ರತಿಭಟನೆ ಮಾಡಲಿ, ನನ್ನ ಹೆಸರು ಹೇಳದಿದ್ದರೆ ಅವರಿಗೆ ನಿದ್ದೆಯೂ ಬರಲ್ಲ, ಅವರಿಗೆ ಮಾರ್ಕೆಟ್ಟೂ ಇಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಎಲ್ಲ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ, ಇವರು ಕಿಂಗ್ ಆಫ್ ಬ್ಲಾಕ್‌ಮೇಲ್ ಎಂದು ದೂರಿದರು.
ಎಲ್ಲವನ್ನು ಚರ್ಚೆ ಮಾಡಲು ಸದನ ಇದೆ. ದಾಖಲೆ ತೆಗೆದುಕೊಂಡು ಬರಲಿ, ಚರ್ಚೆ ಮಾಡುತ್ತೇನೆ. ಇವರೇನೂ ಲಾಯರಾ, ಜಡ್ಜಾ ಆಗಿದ್ದರೆ ನ್ಯಾಯಾಲಯಕ್ಕೆ ಹೋಗಿ ವಾದ ಮಾಡಲಿ ಎಂದು ಆಕ್ರೋಶದಿಂದ ಹೇಳಿದರು.
ಕುಮಾರಸ್ವಾಮಿ ಹಿಂದೆ ರೇವಣ್ಣ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎಂದಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದವರು ಈಗೇಕೆ ಉರಿ ಮಾಡಿಕೊಳ್ಳುತ್ತಿದ್ದಾರೆ, ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಹೆದರಿಸುವುದೇ ಇವರ ಕೆಲಸ ಎಂದು ದೂರಿದರು.
ಎಸ್‌ಐಟಿ ತನಿಖೆ ನಡೆದಿದೆ. ತನಿಖೆಯಾಗಲಿ, ಸತ್ಯಾಂಶ ಹೊರ ಬರುತ್ತದೆ. ಸುಖಾ ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನನ್ನ ಹೆಸರೇಳದಿದ್ದರೆ ಅವರಿಗೆ ಏನೂ ನಡೆಯಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.