ಎಚ್‌ಡಿಕೆ ಆರೋಪ ಹಿಟ್ ಅಂಡ್ ರನ್: ಸಿದ್ದು ವ್ಯಂಗ್ಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೭- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಹಾಗಾಗಿ ಸರ್ಕಾರದ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳು ಹಿಟ್ ಅಂಡ್ ರನ್ ಇದ್ದ ಹಾಗೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ರವರ ೩೭ನೇ ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯಲಿದೆ, ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಿರುವುದು ಸುಳ್ಳು. ಅವರ ಕಾಲದಲ್ಲಿಯೂ ವರ್ಗಾವಣೆಗಳು ಆಗಿದ್ದವು. ಅವರು ದುಡ್ಡು ಪಡೆದಿದ್ದರೇ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ವರ್ಗಾವಣೆಗಳನ್ನು ಆಡಳಿತದ ಹಿತದೃಷ್ಟಿಯಿಂದ ಮಾಡಬೇಕು. ಮಾರ್ಚ್ ಏಪ್ರಿಲ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ವರ್ಗಾವಣೆ ಆಗಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆಗಳು ಆಗುತ್ತಿವೆ ಎಂದರು.ಸರ್ಕಾರ ವರ್ಗಾವಣೆ ಮಾಡಲೇಬೇಕು ಮಾಡುತ್ತಿದೆ. ಅದಕ್ಕೆ ದಂಧೆ ನಡೆದಿದೆ, ಲಂಚ ಪಡೆದಿದ್ದಾರೆ ಎಂಬುದು ಸುಳ್ಳು ಆರೋಪ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಹೆಚ್.ಡಿ. ಕುಮಾರಸ್ವಾಮಿ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಗಳು ಹಿಟ್ ಅಂಡ್ ರನ್ ಆರೋಪಗಳು. ಅವರು ಯಾವ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ ಹೇಳಿ ಎಂದು ವರ್ಗಾವಣೆಗೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸುತ್ತಾ ಹೇಳಿದರು.ಮಾಜಿ ಶಾಸಕ ಹಾಗೂ ತಮ್ಮ ಪುತ್ರ ಯತೀಂದ್ರ ಅವರ ಹೆಸರನ್ನು ವರ್ಗಾವಣೆಗಳಿಗೆ ತಳಕು ಹಾಕಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಯತೀಂದ್ರ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಅಣ್ಣ ಸಚಿವರಾಗಿದ್ದರು, ಅವರ ಪತ್ನಿ ಶಾಸಕರು, ಅವರ ತಂದೆ ಪ್ರಧಾನಿಯಾಗಿದ್ದವರು. ಅವರ ಅಣ್ಣನ ಮಕ್ಕಳು ಶಾಸಕರಾಗಿದ್ದರೂ ಹಾಗಾದರೆ ಇವರನ್ನೆಲ್ಲಾ ಏನಂತ ಕರೆಯಬೇಕು. ಸುಮ್ಮನೆ ಆರೋಪ ಮಾಡುವುದು ಬೇಡ ಎಂದರು.
ಸಚಿವ ಚಲುವರಾಯಸ್ವಾಮಿ ಹೊಣೆಯಲ್ಲ
ಮಂಡ್ಯದಲ್ಲಿ ಸಾರಿಗೆ ಇಲಾಖೆಯ ಚಾಲಕನ ಆತ್ಮಹತ್ಯೆಗೆ ಸಚಿವ ಚಲುವರಾಯಸ್ವಾಮಿ ಕಾರಣ ಎಂಬ ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೃತ ಚಾಲಕ ಡೆತ್‌ನೋಟ್‌ನಲ್ಲಿ ಚಲುವರಾಯಸ್ವಾಮಿ ಅವರ ಹೆಸರು ಬರೆದಿದ್ದು, ಸಚಿವ ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈ ಬಗ್ಗೆ ವಿಚಾರ ಮಾಡುತ್ತೇನೆ. ಮೃತ ಚಾಲಕನ ಪತ್ನಿ ಪಂಚಾಯ್ತಿ ಸದಸ್ಯರಾಗಿದ್ದಾರೆ. ಅಧ್ಯಕ್ಷರಾಗುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಇಲಾಖೆ ಚಾಲಕರನ್ನು ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿರುವ ಕಾರಣಕ್ಕೆ ವಿಷ ಕುಡಿದಿದ್ದಾರೆ ಎಂಬುದು ತಮಗಿರುವ ಮಾಹಿತಿ ಎಂದು ಮುಖ್ಯಮಂತ್ರಿಗಳು ಹೇಳಿದರು.