ಎಚ್‌ಡಿಕೆ ಆಣೆ ಮಾಡಿದರೆ ರಾಜಕೀಯ ನಿವೃತ್ತಿ

ಬೆಂಗಳೂರು, ಅ. ೨೯- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ಹಣ ತಿಂದಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಸವಾಲು ಹಾಕಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುತ್ತಿದ್ದಾರೆ ಎಂಬ ಕುಮಾರಸ್ಮಾಮಿ ಹೇಳಿಕೆಗೆ ಕಿಡಿಕಾರಿದ ಕುಮಾರಸ್ವಾಮಿ ಅವರು ಸತ್ಯಹರಿಶ್ಚಂದ್ರ ಆಗಿದ್ದರೆ ಸೀತೆ ಪತಿವ್ರತೆ ಎಂದು ನಿರೂಪಿಸಲು ಅಗ್ನಿಪ್ರವೇಶ ಮಾಡಿ ಅಗ್ನಿಯಿಂದ ಸುಡದೆ ಹೊರಬಂದಂತೆ ಕುಮಾರಸ್ವಾಮಿ ಅವರು ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಧರ್ಮಸ್ಥಳಕ್ಕೆ ಬಂದು ನಾನು ಸರ್ಕಾರದ ಹಣ ತಿಂದಿಲ್ಲ ಎಂದು ಆಣೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ ಬಾಲಕೃಷ್ಣ, ಆರೋಪ ಮಾಡುವುದನ್ನು ಬಿಟ್ಟು ಸತ್ಯ ನಿರೂಪಿಸಿ, ಇಲ್ಲ ಸುಮ್ಮನೆ ಮಾತನಾಡುವುದನ್ನು ಬಿಡಿ ಎಂದು ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಜನಕ್ಕೆ ಯಾರು ಏನೆಂಬುದು ಗೊತ್ತಿದೆ. ಸತ್ಯ ಹರಿಶ್ಚಂದ್ರರಂತೆ ಕುಮಾರಸ್ವಾಮಿ ಮಾತನಾಡುತ್ತಾರೆ. ಅವರ ಕುಟುಂಬ ಸತ್ಯಹರಿಶ್ಚಂದ್ರ ಕುಟುಂಬ ಆಗಿದ್ದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಅವರು ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.