ಎಚ್‌ಡಿಕೆಗೆ ಆರಗ ತಿರುಗೇಟು

ಬೆಂಗಳೂರು.ಜ.೯:ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಯಾಂಟ್ರೊ ರವಿ ಪ್ರಕರಣ ಇದೀಗ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ನಡುವಣ ವಾಕ್ಸ್ ಸಮರಕ್ಕೆ ಕಾರಣವಾಗಿದೆ.
ಸ್ಯಾಂಟ್ರೊ ರವಿ ತಮ್ಮ ಮನೆಯಲ್ಲಿ ಹಣ ಎಣಿಕೆ ಮಾಡುತ್ತಿರುವ ಫೋಟೊ ವೈರಲ್ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕೆಂಡಾಮಂಡಲವಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಪ ಸಾಬೀತು ಪಡಿಸುವಂತೆ ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ನಿವಾಸದಲ್ಲಿ ಸ್ಯಾಂಟ್ರೊ ರವಿ ಹಣ ಎಣಿಸಿದ್ದಾರೆಂಬುದು ಸುಳ್ಳು. ಕುಮಾರ ಸ್ವಾಮಿಯವರು ಹಸಿ ಸುಳ್ಳು ಹೇಳುವ ಮೂಲಕ ಹತಾಶ ಸ್ಥಿತಿಗೆ ತಲುಪಿದ್ದಾರೆ. ತಮ್ಮ ಮೇಲಿನ ಆರೋಪ ಸಾಬೀತುಪಡಿಸಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅತ್ಯಂತ ಬೇಜವಾಬ್ದಾರಿಯಿಂದ ಹಸಿ ಸುಳ್ಳು ಹೇಳುವ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂಬುದು ವೇದ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸ್ಯಾಂಟ್ರೊ ರವಿ ಹಿನ್ನೆಲೆ ಕುರಿತು ತನಿಖೆ ನಡೆಸಿ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ ರವಿ ಹಣದ ಗಂಟನ್ನು ಬಿಚ್ಚಿದ್ದಾನೆ ಎಂಬ ಹೇಳಿಕೆ ಸತ್ಯಕ್ಕೆ ಅಪಚಾರವಾಗುವಂತಹ ಆರೋಪ ಮಾಡಿ ತಮ್ಮನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಗೃಹ ಸಚಿಚನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಮಾಜದ ಕಟ್ಟಕಡೆಯ ಜನರೂ ಸೇರಿದಂತೆ ಪ್ರತಿನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನು ಸೋಸಿ ನೋಡಲು ಆಗುವುದಿಲ್ಲ ಎಂದು ಗೃಹಸಚಿಚರು ತಿಳಿಸಿದರು.