ಎಚ್ಚರಿಕೆಯಿಂದ ಲೇಖನಿ ಬಳಸಲು ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು6: ಲೇಖನಿ ಕೇವಲ ಬರೆಯುವುದಕ್ಕಲ್ಲ, ಅದು ಅನೇಕ ಸಾಮಾಜಿಕ ಬದಲಾವಣೆಗೆ ಮುನ್ನುಡಿಯಾಗಿದೆ, ಇದನ್ನು ನಾವು ತುಂಬಾ ಎಚ್ಚರಿಕೆಯಿಂದ ಉಪಯೋಗಿಸಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಹಳೆಯ ಹೊನ್ನು-94 ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದ ವಿದ್ಯಾರ್ಥಿಗಳು ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಬೇಕು, ಸ್ವಲ್ಪ ವ್ಯತ್ಯಾಸವಾದರೂ ಕೂಡ ಗಂಭೀರ ಸ್ವರೂಪದ ಬದಲಾವಣೆಗೆ ಕಾರಣವಾಗುತ್ತದೆ. ಇದನ್ನು ಅರಿತುಕೊಂಡು ಭಾಷೆಯನ್ನ ಬಳಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾತೆಂಬುದು ಜ್ಯೋತಿರ್ಲಿಂಗ ಎನ್ನುವ ಧ್ಯೇಯವಾಕ್ಯದೊಂದಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಹಿರಿಯರು ಆರಂಭಿಸಿದ್ದಾರೆ ಇದನ್ನು ಅರಿತು ವಿದ್ಯಾರ್ಥಿಗಳು ಭಾಷೆಯನ್ನು ಬಳಸಬೇಕು.
ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಮಾತನಾಡಿ ಡಾ. ಜಿ.ಜ್ಞಾನಾನಂದ ಅವರ ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ ಪುಸ್ತಕಾವಲೋಕನ ವಿಷಯ ಮಂಡನೆ ಮಾಡುತ್ತಾ ತಂತ್ರಜ್ಞಾನ ವ್ಯವಸ್ಥೆ ಇಂದಿನ ಕಾಲದಲ್ಲ, ಪ್ರಾಚೀನ ಕಾಲದಲ್ಲಿಯೇ ಇಂಜಿನಿಯರಿಂಗ್ ವ್ಯವಸ್ಥೆ,  ರೋಬೋಟಿಕ್, ಸ್ಟೀಲ್ ಬ್ರಿಜ್, ಹೈವೇ ಬೈಪಾಸ್ ರಸ್ತೆಗಳು, ನಗರೀಕರಣ, ಯುದ್ಧದ ನೌಕೆ ಅದರ ಸಾಮಗ್ರಿಗಳು ಹಾಗೂ ಇತರೆ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಂದಿನ ಶಿಲ್ಪಕರು ಇಂತಹ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುತ್ತಿದ್ದರು. ಹಾಗಾಗಿ ಪ್ರಾಚೀನ ಕಾಲದ ತಂತ್ರಜ್ಞಾನಿಗಳು ಎಂದರೆ ಶಿಲ್ಪಕಾರರು ಎಂದು ಡಾ. ಜಿ. ಜ್ಞಾನಾನಂದ ಅವರ ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ ಪುಸ್ತಕದಲ್ಲಿ ಅನೇಕ ಉದಾಹರಣೆಗಳನ್ನು ನೀಡುವ ಮೂಲಕ ಶಿಲ್ಪಕಾರರ ಮಹತ್ವವನ್ನು ತಿಳಿಸಿದ್ದಾರೆ ಎಂದರು.
ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕಿ  ಕಮ್ಮಾರ ಸುಮಾ ಪ್ರಾಸ್ತಾವಿಕ ಮಾತನಾಡಿ ಹೊನ್ನು ಹಳೆಯದಾದರೆ ಅದರ ಮೌಲೆ ಹೆಚ್ಚು, ಈ ನಿಟ್ಟಿನಲ್ಲಿ ಹಳಗನ್ನಡ ಸಾಹಿತ್ಯದ ಅಧ್ಯಯನ ಅವಶ್ಯಕವಾಗಿದೆ. ಇಂತಹ ವೇದಿಕೆಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯಗಳನ್ನು ಚರ್ಚಿಸಿ, ಸಂಶೋಧನೆಯಲ್ಲಿ ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ಸೂಕ್ತವಾಗಿ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಇನ್ನು ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೆ. ರವೀಂದ್ರನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಷೆ ನಿಕಾಯದ ಡೀನ ಡಾ.ಎಫ್.ಟಿ. ಹಳ್ಳಿಕೇರಿ, ಡಾ.ಎಸ್.ಆರ್. ಚನ್ನವೀರಪ್ಪ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ರಮೇಶ್ ನಾಯಕ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಸಂಶೋಧನಾ ವಿದ್ಯಾರ್ಥಿ ಸತೀಶ್ ಗೌಡ. ಬಿ ಕಾರ್ಯಕ್ರಮವನ್ನು ನಿರೂಪಿಸಿದರು, ಲಿಂಗರಾಜ್ ವಂದಿಸಿದರು.