
ಚಿತ್ರದುರ್ಗ.ಏ.೨೨: ಮತದಾನದ ಕಾರ್ಯಗಳಿಗೆ ನಿಯೋಜನೆಗೊಂಡ ಎಲ್ಲಾ ಹಂತದ ಮತದಾನ ಅಧಿಕಾರಿಗಳು ಯಾವುದೇ ಲೋಪದೋಷಗಳಿಗೆ ಅವಕಾಶ ಮಾಡಿಕೊಡದೇ, ಮತದಾನದ ದಿನದಂದು ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯವನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.ಚಳ್ಳಕೆರೆ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಕ್ಷೇತ್ರದ ಕಾರ್ಯಗಳಿಗೆ ನಿಯೋಜನೆಗೊಂಡ ಅಧಿಕಾರಿಗಳ ತರಬೇತಿ ಕಾರ್ಯಗಾರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಅಧಿಕಾರಿಗಳು ತರಬೇತಿಯಲ್ಲಿ ಎಲ್ಲ ವಿಷಯಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಇವಿಎಂ ಯಂತ್ರಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದAತೆ ಮುಂಜಾಗೃತ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಚಳ್ಳಕೆರೆ ಚುನಾವಣಾಧಿಕಾರಿ ಬಿ.ಆನಂದ, ಮೊಳಕಾಲ್ಮೂರು ಚುನಾವಣಾಧಿಕಾರಿ ರಮೇಶ್, ಚಳ್ಳಕೆರೆ ಸಹಾಯಕ ಚುನಾವಣಾಧಿಕಾರಿ ರೆಹಾನ್ ಪಾಷ, ಮೊಳಕಾಲ್ಮೂರು ಸಹಾಯಕ ಚುನಾವಣಾಧಿಕಾರಿ ರೂಪ ಸೇರಿದಂತೆ ಇತರೆ ಚುನಾವಣೆ ಸಿಬ್ಬಂದಿಗಳು ಇದ್ದರು.