
ಪರಂ ಆಕ್ಷೇಪ
(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಜು.೧:ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ಕುರಿತು ರಾಜ್ಯದ ಸಂಚಾರ ವಿಭಾಗದ ಎಡಿಜಿಪಿ ತಮಗೆ ಈ ಬಗ್ಗೆ ಮೌಖಿಕ ವರದಿ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು.
ಟೋಲ್ ವಸೂಲಿ ಮಾಡುವುದು ಬೇಡ ಎಂದು ಸೂಚಿಸಿದ್ದೆವು. ಆದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ಹೇಳಿದರು.ಮೈಸೂರು ಅರಮನೆಗೆ ದಂಪತಿ ಸಮೇತ ಭೇಟಿ ನೀಡಿ ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್‌ರವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಪರಮೇಶ್ವರ್‌ರವರಿಗೆ ಮೈಸೂರುಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಅರಮನೆ ಆಡಳಿತ ಮಂಡಳಿ ಸನ್ಮಾನಿಸಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಚನಾಫಲಕ ಅಳವಡಿಸಿಲ್ಲ. ಇತರ ಹೆದ್ದಾರಿಗಳ ರೀತಿ ವ್ಯವಸ್ಥಿತವಾಗಿ ಯಾವುದೇ ಕ್ರಮಕೈಗೊಂಡಿಲ್ಲ. ಹೆದ್ದಾರಿಗಳಲ್ಲಿ ದರೋಡೆ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಯಲು ಕ್ರಮ ವಹಿಸಿದ್ದೇನೆ ಎಂದರು.ತರಾತುರಿಯಲ್ಲಿ ರಾಜಕೀಯ ದುರುದ್ದೇಶದಿಂದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲಾಗಿದೆ. ಸೂಕ್ತ ಕ್ರಮಕೈಗೊಳ್ಳದಿರುವುದೇ ಹೆದ್ದಾರಿಯಲ್ಲಿ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ಹೆದ್ದಾರಿಯಲ್ಲಿ ಅಪಘಾತದ ಪ್ರಮಾಣವೂ ಹೆಚ್ಚಾಗಿದೆ ಎಂದರೆ ಕಾಮಗಾರಿಯಲ್ಲಿ ಲೋಪವಾಗಿದೆ. ಕುಡಿದು ವಾಹನ ಚಲಾಯಿಸುವುದನ್ನು ಪರಿಶೀಲಿಸಿ ಅಂತಹ ಚಾಲಕರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.ರಾಜ್ಯದ ವಿವಿಧ ಇಲಾಖೆಗಳಲ್ಲಿ ಎರಡೂವರೆ ಲಕ್ಷ ಹುದ್ದೆ ಖಾಲಿ ಇವೆ ಅದನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ೧೫ ಸಾವಿರ ಹುದ್ದೆಗಳು ಖಾಲಿ ಇದ್ದು, ೪ ಸಾವಿರ ಪೊಲೀಸ್ ಪೇದೆ, ೪೦೦ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಭರ್ತಿಗೆ ಕ್ರಮಕೈಗೊಂಡಿದ್ದೇವೆ ಎಂದರು.ಪಿಎಸ್‌ಐ ನೇಮಕಾತಿ ಅಕ್ರಮ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯ ಸರ್ಕಾರದ ಅಭಿಪ್ರಾಯ ಕೇಳಿದೆ. ಜು. ೧೫ ರಂದು ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.ಮೈಸೂರು ಒಡೆಯರ್ ಮನೆತನದವರಿಗೂ ತಮಗೂ ಬಹಳ ವರ್ಷಗಳಿಂದ ಪರಿಚಯವಿದೆ. ಅವರನ್ನು ಭೇಟಿಯಾಗಲು ಮೈಸೂರಿಗೆ ಬಂದಿರುವುದಾಗಿ ಹೇಳಿದರು.
ವರದಿ ಜಾರಿಗೆ ಯತ್ನ
ಪೊಲೀಸ್ ಸಿಬ್ಬಂದಿಗಳ ವೇತನ ಹೆಚ್ಚಳ ಕುರಿತಂತೆ ನಿವೃತ್ತ ಎಡಿಜಿಪಿ ಔರಾದ್ಕರ್ ವರದಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದರು.ಔರಾದ್ಕರ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ವರದಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಜಾರಿಗೆ ತರಲಾಗುವುದು ಎಂದರು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಾರದ ರಜೆ ನೀಡುವ ಬಗ್ಗೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.