ಎಕ್ಸ್‌ಪ್ರೆಸ್‌ವೇ ನಲ್ಲಿ ಅಪಘಾತ ಇಬ್ಬರು ಸಾವು

ಬೆಂಗಳೂರು, ಅ.೧- ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಐವರು ಗಾಯಗೊಂಡಿರುವ ದುರ್ಘಟನೆ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ನಡೆದಿದೆ.
ಪೀಣ್ಯದ ರಾಜೇಶ್ (೪೨), ಉಮಾ (೩೫) ಸಾವನ್ನಪ್ಪಿರುವ ದುರ್ದೈವಿಗಳು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರನಿಂದ ಮೈಸೂರು ಕಡೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಒಮ್ನಿ ಡಿಕ್ಕಿ ಹೊಡೆದಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಹಿಂಬದಿಯಿಂದ ಒಮ್ನಿ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಒಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಒಮ್ನಿಯಲ್ಲಿ ೭ ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದು, ಮಕ್ಕಳು ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಜೇಶ್ ಕುಟುಂಬ ಮೈಸೂರು ಕಡೆಗೆ ತೆರಳುತ್ತಿತ್ತು.
ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ರಾಮನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.