ಎಕ್ಸಿಬಿಷನ್ ಇಂಡಸ್ಟ್ರಿ ಗೆ ಸರ್ಕಾರದ ಸೌಲಭ್ಯ ನೀಡಲು ಮನವಿ

ದಾವಣಗೆರೆ.ಜ.೧೩; ಎಕ್ಸಿಬಿಷನ್ ಆಯೋಜಿಸುವಾಗ ಸುಮಾರು 5-9 ಇಲಾಖೆಗಳಿಂದ ಅನಮತಿ, ಎನ್‌ಓಸಿ ಸೇರಿದಂತೆ ಇತರೆ ದಾಖಲೆ ಪಡೆಯಬೇಕಾಗುತ್ತದೆ. ಹೀಗಾಗಿ ಇವುಗಳನ್ನು ಪಡೆಯಲು ಅಲೆದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಒಂದೇ ಸೂರಿನಲ್ಲಿ ಏಕಗವಾಕ್ಷಿ ಯೋಜನೆಯಡಿ ಅನುಮತಿ ನೀಡಬೇಕು ಎಂದು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈರ‍್ಸ್ ಅಂಡ್ ಅಮ್ಯೂಸ್‌ಮೆಂಟ್ ಓರ‍್ಸ್ ಅಸೋಸಿಯೇಷನ್ ವಕ್ತಾರ ಚೈತನ್ಯಕುಮಾರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸಿಬಿಷನ್ ಮತ್ತು ಅಮ್ಯೂಸ್‌ಮೆಂಟ್ ಕ್ಷೇತ್ರವನ್ನು ಅಂದಾಜು ನಾಲ್ಕು ಲಕ್ಷ ಜನರು ಅವಲಂಬಿಸಿದ್ದಾರೆ. ಹೀಗಾಗಿ ಸರಕಾರ ನಮ್ಮ ಕ್ಷೇತ್ರವನ್ನು ಎಕ್ಸಿಬಿಷನ್ ಇಂಡಸ್ಟ್ರಿ ಎಂಬುದಾಗಿ ಗುರುತಿಸಿ ಸೌಲಭ್ಯ ಕಲ್ಪಿಸಬೇಕು. ಫಯಾರ್ ಶುಲ್ಕ ಕಡಿಮೆ ಮಾಡಬೇಕು. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಜಾತ್ರೆಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಯಾರಿಗೂ ಎಕ್ಸಿಬಿಷನ್ ಹಾಕಲು ಬಿಡಬಾರದು ಎಂದು ಆಗ್ರಹಿಸಿದರು.ಅಸೋಸಿಯೇಷನ್ ಅಧ್ಯಕ್ಷ ಎ.ಭದ್ರಪ್ಪ ಮಾತನಾಡಿ, ಕೋವಿಡ್ ಸೋಂಕು ಬಂದಾದ ಮೇಲೆ ಎಕ್ಸಿಬಿಷನ್ ಸ್ತಗಿತಗೊಂಡಿರುವ ಮತ್ತು ಜಾತ್ರೆ, ಉರುಸು ರದ್ದಾಗಿರುವ ಕಾರಣದಿಂದಾಗಿ ಅಸಂಘಟಿತ ವಲಯವಾಗಿರುವ ಎಕ್ಸಿಬಿಷನ್ ಮತ್ತು ಅಮ್ಯೂಸ್‌ಮೆಂಟ್ ಕ್ಷೇತ್ರದಲ್ಲಿ ದುಡಿಯುವ ಮಾಲೀಕರು, ಆಯೋಜಕರು, ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈರ‍್ಸ್ ಅಂಡ್ ಅಮ್ಯೂಸ್‌ಮೆಂಟ್ ಓರ‍್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ 200 ಎಕ್ಸಿಬಿಷನ್‌ಗಳು ನಡೆಯುತ್ತಿದ್ದವು. ಆದರೆ, ಈ ಎಲ್ಲವೂ ಸ್ತಬ್ದವಾಗಿರುವ ಕಾರಣಕ್ಕೆ ಈ ವಲಯದಲ್ಲಿ ದುಡಿಯು ಕಾರ್ಮಿಕರು ಒಂದು ಹೊತ್ತಿನ ಕೂಳಿಗೂ ಗತಿ ಇಲ್ಲದೆ ಸಂಜೆ ವೇಳೆ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲಸ ಸಿಗದ ಕೆಲವರು ಭಿಕ್ಷೆ ಬೇಡಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಾಟೀಲ್, ಪದಾಧಿಕಾರಿಗಳಾದ ಸಿ.ಕೆ.ದಿನೇಶ್ ಕುಮಾರ್, ಶಬ್ಬೀರ್ ಖಾನ್, ಶ್ರೀನಿವಾಸಯ್ಯ, ಎಸ್.ಶಿವಕುಮಾರ್, ಬಿ.ಅಚ್ಚು ಹಾಜರಿದ್ದರು.