ಎಕ್ಸಲಂಟ್ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧನೆ

ವಿಜಯಪುರ,ಜ.26:ನವ ಮತದಾರರಲ್ಲಿ ಜಾಗೃತಿ ಮೂಡಿಸಿ, ಪ್ರಜಾಪ್ರಭುತ್ವದ ಯಶಸ್ವಿಗಾಗಿ ವಿಜಯಪುರದ ಕೆ.ಎಸ್.ಆರ್.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಮಾತನಾಡಿ, ಪ್ರಜಾಪ್ರಭುತ್ವದ ಘನತೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಶಯದ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ನಮ್ಮ ಮತ ನಮ್ಮ ಆಯ್ಕೆ. ಜಾತಿ-ಮತ-ಜನಾಂಗ, ಭಾಷೆಯ ಪ್ರೇರೆಪಣೆ ದಾಕ್ಷಿಣ್ಯಗಳಿಗೆ ಒಳಗಾಗದೇ ನಿರ್ಭಿತದಿಂದ ಮತ ಚಲಾಯಿಸಬೇಕೆಂದು ನುಡಿದರು.

ಕಾಲೇಜಿನ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಮಾತನಾಡಿ, ಚುನಾವಣೆಗಳೆಂದರೆ ಹಬ್ಬವಿದ್ದಂತೆ. ಆ ಉತ್ಸವದಲ್ಲಿ ಎಲ್ಲ ಮತದಾರರು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು. ಹೊಸ ಆಶೋತ್ತರಗಳ ಈಡೇರಿಕೆಗೆ ನವ ಮತದಾರರು ಅಸಡ್ಡೆ ತೋರದೆ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಯಶಸ್ಸನ್ನು ಗಟ್ಟಿಗೊಳಿಸಬೇಕೆಂದರು.

ಉಪನ್ಯಾಸಕ ರವಿ ಕಲ್ಲೂರಮಠ ಅವರು ಸರ್ಕಾರದ ಆದೇಶದ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ರಮೇಶ ಬಾಗೆವಾಡಿ, ಅವಿನಾಶ ಬಡಿಗೇರ, ಎಮ್. ಎಮ್. ಮಲಘಾಣ, ಗುರುರಾಜ ಕೌಲಗಿ, ಎಸ್. ಆರ್. ಪಾಟೀಲ, ಮಂಜುನಾಥ ತುಮ್ಮರಮಟ್ಟಿ, ನಟರಾಜ ಮ್ಯಾಗೇರಿ, ಸಿದ್ದಪ್ಪ ಹುಬ್ಬಳ್ಳಿ ಮುಂತಾದ ಉಪನ್ಯಾಸಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.