ಎಕೆಬಿಎಸ್‌ಗೆ ಸಂಘಟನಾ ಶಕ್ತಿ ತುಂಬುವ ಇಚ್ಛೆ ನನ್ನದು

ದಾವಣಗೆರೆ.ನ.೭: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸಂಘಟನೆ ಕೊರತೆ ಇದೆ. ಇದಕ್ಕೆ ಸಂಘಟನಾ ಶಕ್ತಿ ತುಂಬಬೇಕೆಂಬ ಇಚ್ಛೆ ನನ್ನದಾಗಿದೆ. ಡಿಸೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಎಕೆಬಿಎಸ್‌ಗೆ ಹೊಸ ರೂಪ ಕೊಡಲು ಬದ್ಧನಾಗಿದ್ದೇನೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಂಗಾಮಿ ಅಧ್ಯಕ್ಷರು ಹಾಗೂ ಅಭ್ಯರ್ಥಿಯಾಗಿರುವ ಅಶೋಕ್ ಹಾರನಹಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಮುಂಚೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ನಾನು ಹಂಗಾಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಇರಲಿಲ್ಲ. ತಾತ್ಕಾಲಿಕವಾಗಿ ಈ ಚುನಾವಣೆ ಮಾಡಿ ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೆ, ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಹೊರ ಹೋಗಬೇಕೆಂಬ ಆಲೋಚಿಸಿದ್ದೆ. ತಾತ್ಕಾಲಿಕವಾಗಿ ಹಂಗಾಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅಲ್ಲಿನ ಸ್ಥಿತಿಗತಿ ನೋಡಿದಾಗ ಈ ಸಂಘಟನೆಯಲ್ಲಿ ಕೆಲವು ಮೂಲಭೂತ ಬದಲಾವಣೆ ಮಾಡುವ ಅವಶ್ಯಕತೆ ಇದೆ ಎಂದು ಕಂಡು ಬಂತು. ಇದಕ್ಕೆ ಹೊಸ ರೂಪ ಕೊಡಬೇಕೆಂಬ ಇಚ್ಛೆಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದೆ ಎಂದು ತಿಳಿಸಿದರು.ಗಾಯತ್ರಿ ಭವನ ಮತ್ತು ವನಿತಿಯರ ವಸತಿ ಕಟ್ಟಡ ಬೆಂಗಳೂರಿನ ಎಕೆಬಿಎಸ್‌ನ ನಿಯಂತ್ರಣದಲ್ಲಿವೆ. ಗಾಯತ್ರಿ ಭವನ ಕಟ್ಟಡದ ಕಾಮಗಾರಿ ನಡೆದು 3 ಮತ್ತು 4ನೇ ಮಹಡಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ನಾನು ಹಂಗಾಮಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅದನ್ನು ಪೂರ್ಣಗೊಳಿಸಿದ್ದೇನೆ. ಅದೇ ರೀತಿ ವನಿತಿಯರ ವಸತಿ ನಿಲಯದಲ್ಲಿ ಅನೇಕ ಸಮಸ್ಯೆಗಳು ಇದ್ದವು. ನಾನು ಖದ್ದು ಭೇಟಿ ನೀಡಿದಾಗ ಅಲ್ಲಿನ ವನಿತಿಯರು ಕಳೆದ ಮೂರು ವರ್ಷದಿಂದ ನಮ್ಮ ಸಮಸ್ಯೆ ಆಲಿಸಲು ಯಾರು ಬಂದಿಲ್ಲ ಎಂದು ತಿಳಿಸಿದರು. ಕೂಡಲೇ ಹೊನ್ನಾಪುರ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರತಿನಿತ್ಯ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ಸೂಚಿಸಿದ್ದೆ. ಅದರಂತೆ ಪ್ರತಿನಿತ್ಯ ಅಲ್ಲಿನ ವರದಿ ತರಿಸಿಕೊಂಡು ಈಗ ಅಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.ತಾವು ಅಧ್ಯಕ್ಷರಾಗಿ ಮುಂದುವರಿದರೆ ಇಡೀ ರಾಜ್ಯಾದ್ಯಂತ ವಿಪ್ರ ಸಮುದಾಯ ಸಂಘಟಿಸುವುದರೊAದಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಹೊಸ ಸ್ವರೂಪ ನೀಡಿ, ಸಮುದಾಯದ ಏಳ್ಗೆಗೆ ಶ್ರಮಿಸುತ್ತೇನೆ. ಇವರು ಸದಾ ಬ್ಯುಜಿಯಾಗಿರುವ ವ್ಯಕ್ತಿ. ಇವರು ಅಧ್ಯಕ್ಷರಾದರೆ ಎಕೆಬಿಎಸ್‌ನ ಸಂಘಟನೆ ಸಾಧ್ಯವೇ ಎಂದು ಸಮುದಾಯದ ಕೆಲವರು ಪ್ರಶ್ನಿಸುತ್ತಿದ್ದಾರೆ. ತಾವು ವಕೀಲ ವೃತ್ತಿಯಲ್ಲಿರುವುದರಿಂದ ಎಕೆಬಿಎಸ್ ಸಂಘಟನೆಗೆ ಸಹಾಯಕವಾಗುತ್ತದೆ. ಒಮ್ಮೆ ಅವಕಾಶ ಮಾಡಿಕೊಟ್ಟು ನೋಡಿ, ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಟಿ.ಅಚ್ಯುತ್‌ರಾವ್ ಮಾತನಾಡಿ, ಎಕೆಬಿಎಸ್‌ನಲ್ಲಿ ಸಾಕಷ್ಟು ತಪ್ಪು ಆಗಿದೆ. ಅದನ್ನು ತಿದ್ದಲು ಹೊರಟಿರುವುದು ಸಂತೋಷದ ಸಂಗತಿ. ವಕೀಲ ವೃತ್ತಿಯಲ್ಲಿ ಪರಿಣಿತಿ ಇರುವುದರಿಂದ ಅಶೋಕ್ ಹಾರನಹಳ್ಳಿ ಅವರು, ಸಂಘದ ಜವಾಬ್ದಾರಿ ವಹಿಸಿಕೊಳ್ಳಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಡಿಸೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ವಿಪ್ರ ಸಮುದಾಯದಲ್ಲಿ ಸಾಕಷ್ಟು ಬಡವರಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ವಿವಾಹ ಮಾಡುವುದಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪುರೋಹಿತರು, ಅಡುಗೆ ಭಟ್ಟರು ಹೀಗೆಯ ಸಮಾಜದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೀವು ಅಧಿಕಾರ ತೆಗೆದುಕೊಂಡ ಮೇಲೆ ಗಮನ ಹರಿಸಬೇಕೆಂದು ಮನವಿ ಮಾಡಿದರು.ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ಸತ್ಯನಾರಾಣ ಮಾತನಾಡಿದರು. ಈ ಸಂದರ್ಭದಲ್ಲಿ ಗಿರೀಶ್, ಶ್ರೀಧರ್, ಶಶಿಕಾಂತ್, ಹೇಮಂತ್, ಅನಿಲ್ ಬಾರಂಗಳ್, ಅಶೋಕ್ ಭಟ್, ಉಮಾಕಾಂತ್ ದೀಕ್ಷಿತ್ ಸೇರಿದಂತೆ ಇನ್ನಿತರರಿದ್ದರು.