ಎಕರೆಗೆ ೨೫ಸಾವಿರ ರೂ. ಪರಿಹಾರ ನೀಡಿ

ದೇವದುರ್ಗ.ನ.೧೭- ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಎಕರೆ ಕನಿಷ್ಠ ೨೫ಸಾವಿರ ರೂ. ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂಭಾಗದಲ್ಲಿ ಕರ್ನಾಟಕ ಜಾಗೃತ ರೈತ ಸಂಘದ ಮುಖಂಡರು ಇಚ್ಚೇಗೆ ಪ್ರತಿಭಟನೆ ನಡೆಸಿದರು.
ಅತಿಯಾದ ಮಳೆಯಿಂದ ತಾಲೂಕು ಸೇರಿ ರಾಜ್ಯಾದ್ಯಂತ ರೈತರ ಲಕ್ಷಾಂತರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಅತಿಯಾದ ಮಳೆಯಿಂದ ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ, ಸಜ್ಜೆ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರು ಎಕರೆಗೆ ಕನಿಷ್ಠ ೨೫-೩೦ಸಾವಿರ ರೂ.ಗೂ ಅಧಿಕ ಖರ್ಚು ಮಾಡಿದ್ದಾರೆ. ಬೆಳೆ ಬರುವ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ, ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆ ನಾಮ್‌ಕೆ ಅವಸ್ತ ಎನ್ನುವಂತೆ ಸರ್ವೇ ಮಾಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದರು.
ಕೂಡಲೇ ಸಮಗ್ರ ಸಮೀಕ್ಷೆ ನಡೆಸಿ ರೈತರಿಗೆ ವೈಜ್ಞಾನಿಕವಾಗಿ ಎಕರೆ ಕನಿಷ್ಠ ೨೫ಸಾವಿರ ರೂ. ಪರಿಹಾರ ೧೫ದಿನಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸಣ್ಣ, ಅತಿಸಣ್ಣ ಹಿಡುವಳಿದಾರರ ಬ್ಯಾಂಕ್ ಹಾಗೂ ಸಹಕಾರ ಸಂಘದ ಸಾಲಮನ್ನಾ ಮಾಡಬೇಕು. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇನ್ನಿತರ ವಸ್ತುಗಳ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು. ವೈಜ್ಞಾನಿಕ ಬೆಂಬಲಬೆಲೆಯೊಂದಿಗೆ ಎಲ್ಲ ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೈಗೊಂಡ ಕೃಷಿ ಹಾಗೂ ರೈತ ವಿರೋಧಿ ಒಪ್ಪಂದ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಸ್.ರವಿ ಮಸರಕಲ್, ಉಪಾಧ್ಯಕ್ಷ ಡ್ಯಾನೆಲ್ ಬೊಮ್ಮನಾಳ, ರಾಜುಗೌಡ ಚಿಕ್ಕಬೂದೂರು, ಬಸವರಾಜ ಮಿಯ್ಯಾಪುರ, ಮುತ್ತಯ್ಯ ಮಸರಕಲ್, ಶ್ರೀಮಂತ ಒಗ್ಗರ್, ಮಲ್ಲಯ್ಯ, ರಮೇಶ, ಪ್ರಭು ಇದ್ದರು.