ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಸೂಚನೆ ಗೆಲ್ಹೋಟ್-ತರೂರ್ ಸೆಣಸು

ನವದೆಹಲಿ,ಸೆ.೨೨- ತೀವ್ರ ಕುತೂಹಲ ಕೆರಳಿಸಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಲಾಗಿದೆ.
ಅ. ೧೭ ರಂದು ಚುನಾವಣೆ ನಡೆಯಲಿದ್ದು, ಸೆ. ೨೪ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ. ೩೦ರಂದು ನಾಮಪತ್ರ ಸಲ್ಲಿಕೆಗೆ ಕಡೆದಿನವಾಗಿದೆ. ಅ. ೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆಯಲು ಅ. ೮ ಕಡೆಯ ದಿನವಾಗಿದೆ ಎಂದು ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್‌ಮಿಸ್ತ್ರಿ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಅವರು ಸ್ಪರ್ಧಿಸುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹಾಗೂ ಹಿರಿಯ ನಾಯಕ ಶಶಿತರೂರ್ ಮಧ್ಯೆ ಸ್ಪರ್ಧೆಗೆ ಅಖಾಡ ಸಜ್ಜಾಗುತ್ತಿದೆ.
ಹೀಗಾಗಿ ೨೦ ವರ್ಷದ ಬಳಿಕ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬ ಹೊರತುಪಡಿಸಿ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷ ಪಟ್ಟ ಅಲಂಕರಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಇದೇ ಮೊದಲ ಬಾರಿಗೆ ರಾಹುಲ್‌ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್‌ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಚುನಾವಣೆಗೆ ಸ್ಪರ್ಧಿಸುವಂತೆ ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಘಟಕಗಳು ನಿರ್ಣಯ ಅಂಗೀಕರಿಸಿ ರಾಹುಲ್‌ಗಾಂಧಿ ಅವರ ಮೇಲೆ ಒತ್ತಡ ಹೇರಿದ್ದರೂ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವ ಶಶಿತರೂರ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರನ್ನು ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ನಾಮಪತ್ರ ಹಾಗೂ ಪ್ರಚಾರ ಸೇರಿದಂತೆ ಚುನಾವಣೆಯ ನಿಯಮಾವಳಿಗಳ ಬಗ್ಗೆಯೂ ಮಿಸ್ತ್ರಿ ಜತೆ ಚರ್ಚಿಸಿದ್ದಾರೆ. ೯ ಸಾವಿರ ಪಿಸಿಸಿ ಪ್ರತಿನಿಧಿಗಳನ್ನು ಭೇಟಿ ಮಾಡಿ ಮತಯಾಚಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಸಿದ್ಧತೆ ಮಾಡಿಕೊಂಡಿದ್ದಾರೆ. ಕಡೇ ಘಳಿಗೆಯವರೆಗೂ ರಾಹುಲ್ ಅವರ ಮನವೊಲಿಕೆಗೆ ಗೆಲ್ಹೋಟ್ ಪ್ರಯತ್ನಿಸಿದ್ದರು. ಆದರೆ, ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿ ಅವರು ನಾಮಪತ್ರ ಸಲ್ಲಿಸುವ ಯಾವುದೇ ಯೋಜನೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಗೆಲ್ಹೋಟ್ ಸ್ಪರ್ಧೆ ಖಚಿತವಾಗಿದೆ.
ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಗೆಲ್ಹೋಟ್, ರಾಜಸ್ತಾನ ಮುಖ್ಯಮಂತ್ರಿ ಹುದ್ದೆಯಲ್ಲಿ ಅವರನ್ನು ಮುಂದುವರೆಸುವ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ್ ಜೋಡೊ ಯಾತ್ರೆಗೆ ಬಿಡುವು ನೀಡಿ ಕೊಚ್ಚಿಯಿಂದ ನಾಳೆ ದೆಹಲಿಗೆ ಆಗಮಿಸಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಿದರು.