ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರ ಅನುಮತಿ ಬೇಕಿಲ್ಲ:ಜೈರಾಮ್ ರಮೇಶ್

ನವದೆಹಲಿ, ಸೆ.20-ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರ ಅನುಮತಿಯೂ ಬೇಕಿಲ್ಲ. ಪಕ್ಷವು ಸಂಪೂರ್ಣವಾಗಿ ಆಂತರಿಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದು, ಯಾರು ಬೇಕಾದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಪಕ್ಷದ ವಕ್ತಾರ ಜೈರಾಮ್‌ ರಮೇಶ್‌ ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಸೋನಿಯಾ ಗಾಂಧಿ ಅನುಮತಿ ನೀಡಿದ್ದಾರೆ ಎಂಬ ಶಶಿ ತರೂರ್ ಹೇಳಿಕೆಯನ್ನು ಅವರು ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವುದಷ್ಟೇ ಕಾಂಗ್ರೆಸ್‌ ಮುಂದಿರುವ ಸದ್ಯದ ಗುರಿ. ಭಾರತ್‌ ಜೋಡೋ ಯಾತ್ರೆ ನೈಜ ಭಾರತದ ಉದಯಕ್ಕೆ ಕಾರಣವಾಗಲಿದೆ ಎಂದರು.
ನೈಜ ಕಾಂಗ್ರೆಸ್ಸಿಗ ಈ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾನೆ.ಇದರ ಮಧ್ಯೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಕೇವಲ ಒಂದು ಪ್ರಕ್ರಿಯೆ ಮಾತ್ರ. ಈ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೂ ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದ ಸೋನಿಯಾ ಗಾಂಧಿ, ನಿನ್ನೆ ಸವದೇಶಕ್ಕೆ ಮರಳಿದ್ದರು. ಈ ವೇಳೆ ಸೋನಿಯಾ ಅವರನ್ನು ಭೇಟಿ ಮಾಡಿದ್ದ ಶಶಿ ತರೂರ್‌, ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಪಡೆದಿದ್ದರು..
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಕೋಟ್ ಸ್ಫರ್ಧಿಸುವುದು ಖಚಿತವಾಗಿದೆ. ಹೀಗಾಗಿ ತರೂರ್ ಮತ್ತು ಗೆಹ್ಲೋಟ್ ನಡುವೆ ಸ್ಪರ್ಧೆ ಏರ್ಪಡಲಿದೆ.