
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.09: ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನಗರ ಕಛೇರಿಯಲ್ಲಿ ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಶ್ರಮಿಕ ಹೆಣ್ಣು ಮಕ್ಕಳಿಗೆ ಹೋರಾಟದ ಹಾದಿ ತುಳಿಯಲು ಸಂಕಲ್ಪ ಮೂಡಿಸುವ ದಿನವಾಗಿ ಇದನ್ನು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಶಾಂತಾ ಅವರು “1908 ರ ಮಾರ್ಚ್ 8ರಂದು ಉತ್ತಮ ವೇತನ ಹಾಗೂ ಉತ್ತಮ ದುಡಿಯುವ ಪರಿಸ್ಥಿತಿಗೆ ಆಗ್ರಹಿಸಿ 20 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಪೊಲೀಸರಿಗೆ ತುತ್ತಾದದ್ದು ಒಂದು ಮಹಾನ್ ಇತಿಹಾಸ ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿ,
“ಮಹಿಳೆಯರು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವೇತನದ ಕೂಲಿಗಳಾಗಿ ಪರಿವರ್ತಿತರಾಗಿದ್ದಾರೆ. ಇದೀಗ ನಮ್ಮ ದೇಶದಲ್ಲಿ ಕೋಟ್ಯಂತರ ದುಡಿಯುವ ಹೆಣ್ಣು ಮಕ್ಕಳು ಜೀವನ ಯೋಗ್ಯ ವೇತನವಿಲ್ಲದೆ ಪರಿತಪಿಸುತ್ತಿದ್ದಾರೆ. ಆಳುವ ಬಂಡವಾಳಶಾಹಿ ಸರ್ಕಾರಗಳ ಅಮಾನವೀಯ ಧೋರಣೆಯಿಂದಾಗಿ ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೆ ಶ್ರಮಿಕ ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆಂದರು.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಅಧ್ಯಕ್ಷತೆವಹಿಸಿದ್ದರು. ಸಂಘದ ಮುಖಂಡರಾದ ಮುರಳಿ ಕೃಷ್ಣ, ಲಕ್ಷ್ಮಿ ಈಶ್ವರಮ್ಮ ಮುಂತಾದವರು ಉಪಸ್ಥಿತರಿದ್ದರು.