ಎಐಡಿವೈಓ ಆನ್‍ಲೈನ್ ಯುವಜನ ಕಾರ್ಯಾಗಾರ: ಸಂಘಟಿತ ಹೋರಾಟಕ್ಕೆ ಕರೆ

ಕಲಬುರಗಿ,ನ.9- ನಮ್ಮ ಸಮಾಜದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ದೇಶವು ಜಾತಿ ರಾಜಕೀಯದಿಂದ ಬಹುಬೇಗ ವರ್ಗ ರಾಜಕೀಯದತ್ತ ಸಾಗಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಂ.ಚಂದ್ರಪೂಜಾರಿ ಅವರು ಅಭಿಪ್ರಾಯಪಟ್ಟರು.
ಎಐಡಿವೈಓ ರಾಜ್ಯಸಮಿತಿಯು ಆಯೋಜಿಸಿದ್ದ ನಿರುದ್ಯೋಗ – ವಿವಿಧ ಆಯಾಮಗಳು ಮತ್ತು ಸಂಘಟಿತ ಹೋರಾಟ’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ಆನ್‍ಲೈನ್ ಯುವಜನ ಕಾರ್ಯಾಗಾರದಲ್ಲಿ ಮಾತನಾಡಿ ಕರೆ ನೀಡಿದರು.
ನಮ್ಮ ದೇಶದಲ್ಲಿ ತೀವ್ರವಾದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ದೇಶದಲ್ಲಿ 2018ರರಲ್ಲಿ 130ಕೋಟಿ ಜನಸಂಖ್ಯೆಗೆ 65ಕೋಟಿ ಜನ ಉದ್ಯೋಗ ಕೇಳುತ್ತಿದ್ದಾರೆ. ಅವರಲ್ಲಿ ಕೇವಲ 52ಕೋಟಿಗೆ ಮಾತ್ರ ಉದ್ಯೋಗ ಸಿಕ್ಕಿದೆ. 13ಕೋಟಿ ಜನ ನಿರುದ್ಯೋಗಿಗಳಿದ್ದಾರೆ. 2020ರ ಬಡತನ ಸೂಂಚ್ಯಕದಲ್ಲಿ 107 ದೇಶಗಳಲ್ಲಿ ಭಾರತದ ಸ್ಥಾನ 94ರಲ್ಲಿದೆ. ನೇಪಾಳ 73, ಶ್ರೀಲಂಕಾ 64, ಪಾಕಿಸ್ತಾನ 88ರಲ್ಲಿದೆ. ಇಂಡಿಯನ್ ಅಗ್ರಿಕಲ್ಚರ್ ಆರ್ಗನೈಸೇಷನ್ ಸರ್ವೆ ಪ್ರಕಾರ ಶೇ.39 ರಷ್ಟು ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆರೋಗ್ಯಯುತ ಆಹಾರದ ಕೊರತೆ ಇರುವವರ ಸಂಖ್ಯೆ ಶೇ.78 ಇದೆ. ಇದು ನಿರುದ್ಯೋಗದ ಭೀಕರ ಪರಿಣಾಮವಾಗಿದೆ ಎಂದರು.
ಎಐಡಿವೈಓದ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ ನಿರುದ್ಯೋಗದಿಂದ ನರಳುವ ಪ್ರತಿಯೊಬ್ಬ ಯುವಕನೂ ಅದಕ್ಕೆ ಸಂಬಂಧಿಸಿದ ಆರ್ಥಿಕ ಸಾಮಾಜಿಕ ರಾಜಕೀಯ ಆಯಾಮದ ಎಲ್ಲ ಮಗ್ಗಲುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅದನ್ನು ನಿವಾರಿಸುವುದು ಅಸಾಧ್ಯ. ಮಾನವ ಸಮಾಜದ ಇತಿಹಾಸದ ಪ್ರತಿಯೊಂದು ಘಟ್ಟದಲ್ಲೂ ಯುವಜನರಿದ್ದರು. ಅವರಲ್ಲಿ ಅಸ್ತಿತ್ವದಲ್ಲಿದ್ದ ನಂಬಿಕೆ ಮತ್ತು ವಾದಗಳನ್ನು ಒಪ್ಪಿಕೊಂಡಿದ್ದ ಒಂದು ದೊಡ್ಡ ಗುಂಪು ಒಂದೆಡೆಯಾದರೆ ಆ ವ್ಯವಸ್ಥೆಯ ಕುರುಡು ನಂಬಿಕೆಗಳನ್ನು, ಅಸ್ತಿತ್ವದಲ್ಲಿದ್ದ ಅಧಿಕಾರಶಾಹಿ ಶೋಷಣೆಯನ್ನು ಪ್ರಶ್ನಿಸಿ ಹೋರಾಡಿದ ಮತ್ತೊಂದು ಕ್ರಾಂತಿಕಾರಿ ಯುವಜನ ಪಡೆ ಇದ್ದಿತು. ಇದುವರೆಗಿನ ಎಲ್ಲಾ ಪ್ರಗತಿಗಾಮಿ ಬದಲಾವಣೆ ಅಂತಹ ಕ್ರಾಂತಿಕಾರಿ ಪಡೆಯಿಂದ ಆಗಿದೆ. ಈಗಲೂ ಸಹ ಇದರ ಅವಶ್ಯಕತೆ ಇದೆ ಎಂದರು.
ನಿರುದ್ಯೋಗ ನಿವಾರಣೆಗೆ ತಡೆರಹಿತವಾಗಿ ಕೈಗಾರಿಕೀಕರಣ ನಡೆಯಬೇಕು. ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇರುವ ಉದ್ದಿಮೆಗಳನ್ನು ಉಳಿಸಿಕೊಂಡು ನಿಯಮಿತವಾಗಿ ಉದ್ಯೋಗಗಳನ್ನು ಸೃಷ್ಟಿಸಬಹುದು. ಸರ್ಕಾರಗಳು ಇತ್ತ ಗಮನಹರಿಸುತ್ತಿಲ್ಲ. ವಿದೇಶಗಳಿಂದ ಸಾಲ ತಂದು ದೇಶೀಯ ಬಂಡವಾಳಿಗರಿಗೆ ನೆರವು ನೀಡಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಉದ್ಯೋಗಗಳ ಸೃಷ್ಟಿಗಾಗಿ ಮೊದಲು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯೋಗ ಸೃಷ್ಟಿಮಾಡದ ಬಂಡವಾಳಿಗರಿಗೆ ನೀಡಿರುವ ತೆರಿಗೆ ರಿಯಾಯಿತಿಗಳನ್ನು ಮತ್ತು ಸೌಲಭ್ಯಗಳನ್ನು ವಾಪಾಸು ತೆಗೆದುಕೊಳ್ಳಬೇಕು. ಬ್ಯಾಂಕ್‍ಗಳಿಂದ ಸಾಲಪಡೆದು ವಂಚಿಸುರುವ ಬಂಡವಾಳಿಗರಿಂದ ಅವರ ಸಾಲಗಳನ್ನು ವಸೂಲಿ ಮಡಬೇಕು. ವಂಚಕರನ್ನು ಜೈಲಿಗಟ್ಟಬೇಕು. ಅದಕ್ಕಾಗಿ ನಾವು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿವೈಓದ ರಾಜ್ಯ ಕಾರ್ಯದರ್ಶಿ ಡಾ. ಜಿ.ಎಸ್.ಕುಮಾರ್ ಕರೋನಾದಿಂದ ಜನತೆ ಸಮಸ್ಯೆ ಎದರಿಸುತ್ತಿದ್ದಾರೆ. ಇದರಿಂದ ಮೊದಲ 3 ತಿಂಗಳಲ್ಲೇ 2ಕೋಟಿಗೂ ಹೆಚ್ಚು ಉದ್ಯೋಗಗಳು ನಾಶವಾದವು. ಇಂದು ದೇಶದಾದ್ಯಂತ 45 ಕೋಟಿ ನಿರುದ್ಯೋಗಿಗಳಿದ್ದಾರೆ. ಯುವಜನ ನಿರುದ್ಯೋಗದಿಂದ ತತ್ತರಿಸಿದ್ದಾರೆ. ಅಂತಹ ಯುವಜನರ ಮುಂದಿನ ದಾರಿ ಏನು. ನಿರುದ್ಯೋಗದ ವಿರುದ್ಧ ನಾವು ಯಾವ ರೀತಿಯ ಹೋರಾಟ ಕಟ್ಟಬೇಕು ಎಂಬುದನ್ನು ತಿಳಿಯಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಐಡಿವೈಓದ ರಾಜ್ಯಾಧ್ಯಕ್ಷರಾದ ಎಂ. ಉಮಾದೇವಿ ಅವರು ಮಾತನಾಡಿ ನಿರುದ್ಯೋಗದ ವಿರುದ್ಧ ದೇಶವ್ಯಾಪಿಯಾಗಿ ಯುವಜನರ ಪ್ರಬಲ ಹೋರಾಟ ಕಟ್ಟುವ ಸಲುವಾಗಿ ಈ ಕಾರ್ಯಾಗಾರವನ್ನು ನಡೆಸಲಾಯಿತು. ಇದರ ನಂತರ ನಾವು ಬಲಿಷ್ಟವಾದ ಸಂಘಟನೆ ಕಟ್ಟಬೇಕಿದೆ. ಅದಕ್ಕಾಗಿ ಎಲ್ಲೆಡೆ ಹೋರಾಟ ಸಮಿತಿಗಳನ್ನು ನಾವು ರಚಿಸಬೇಕು ಎಂದರು.
ಎಐಡಿವೈಓದ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಕಾ.ಲಕ್ಷ್ಮಣ್ ಜಡಗನ್ನವರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಮತ್ತೋರ್ವ ರಾಜ್ಯ ಉಪಾಧ್ಯಕ್ಷರಾದ ಕಾ.ಶರಣಪ್ಪ ಉದ್ಬಾಳ್ ಅವರು ವಂದಿಸಿದರು. ಕಾರ್ಯಾಗಾರದ ನಡುವೆ ವಿವಿಧ ಜಿಲ್ಲೆಯ ಸಂಗಾತಿಗಳು ಕ್ರಾಂತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಆನ್‍ಲೈನ್ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ ಅವರು ಕಾರ್ಯಾಗಾರ ನಡೆಸಿಕೊಟ್ಟರು ಎಂದು ನಿಂಗಣ್ಣಾ ಎಸ್.ಜಂಬಗಿ ಮತ್ತು ಜಗನ್ನಾಥ ಎಸ್ ಹೆಚ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.