
ಕಲಬುರಗಿ,ಅ 28: ನಗರದ ಕನ್ನಡ ಭವನದಲ್ಲಿ ಕಲಬುರಗಿ, ಬೀದರ, ವಿಜಯಪುರ ಮತ್ತು ಬಾಗಲಕೇಟೆ ಜಿಲ್ಲೆಗಳು ಸೇರಿ ವಲಯ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಉದ್ದೇಶಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರವಿ.ಬಿ ಮಾತನಾಡಿ ಶಿಕ್ಷಣವು ಮೊಗ್ಗಿನಂತಿರುವ ಮಕ್ಕಳ ಮನಸ್ಸನ್ನು ಅರಳಿಸಬೇಕು. ನಿಸರ್ಗ ಹಾಗೂ ಸುತ್ತಮುತ್ತಲಿನ ಸಮಾಜವನ್ನು ಬೆರಗು ಕಣ್ಣಿನಿಂದ ನೋಡುವಂತೆ ಕುತೂಹಲವನ್ನುಂಟು ಮಾಡಬೇಕು. ಪ್ರಶ್ನಿಸುವ ಹಾಗೂ ತರ್ಕಬದ್ದವಾಗಿ ಯೋಚಿಸುವ ಸಾಮಥ್ರ್ಯವನ್ನು ಬೆಳೆಸಬೇಕು. ಹಾಗೆಯೇ ಯಾವುದೇ ಬಾಹ್ಯ ಒತ್ತಡವಿಲ್ಲದೆ ಮಗುವಿನ ಸಮಗ್ರ ವ್ಯಕ್ತಿತ್ವ ವಿಕಸನ ಮಾಡುವ ಕ್ರಿಯೆಯೂ ಶಿಕ್ಷಣದಾಗಬೇಕು. ಆದರೆ ಇಂದು ಪಠ್ಯಕ್ರಮವನ್ನು ಕೇವಲ ಮಾಹಿತಿ ಸಂಗ್ರಹಣೆಗೆ ಸೀಮಿತಗೊಳಿಸಿ ಮಕ್ಕಳನ್ನು ಯಂತ್ರ ಮಾನವನಾಗಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಬಡವರು, ದುಡಿಯುವ ಜನತೆಯು ಹಾಗೂ ಕೆಳ ಮಧ್ಯಮ ವರ್ಗದವರು ಪಡೆಯುತ್ತಿದ್ದ ಅಲ್ಪಸ್ವಲ್ಪ ಶಿಕ್ಷಣವು ಇಂದು ಗಗನಕುಸುಮವಾಗುತ್ತಿದೆ. ಹಂತ ಹಂತವಾಗಿ ಇಡೀ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ಅವರಿಗೆ ಒಪ್ಪಿಸಲಾಗುತ್ತಿದೆ. ಇದರಿಂದಾಗಿ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತಿದೆ.
ಇನ್ನೊಂದೆಡೆ ಟಿವಿ, ಅಂತರ್ಜಾಲ ಹಾಗೂ ಮಾಧ್ಯಮಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಅಶ್ಲೀಲತೆ ಹಾಗೂ ಕ್ರೌರ್ಯ ಹರಿದಾಡುತ್ತಿದೆ. ಈ ಕಲುಷಿತ ವಾತಾವರಣದಿಂದ ಹೊರಬರಲು ನಮಗೆ ನವೋದಯ ಕಾಲದಲ್ಲಿನ ಈಶ್ವರ್ ಚಂದ್ರ ವಿದ್ಯಾಸಾಗರ್, ಶರತ್ ಚಂದ್ರ ಚಟರ್ಜಿ, ಸಾವಿತ್ರಿಬಾಯಿ ಫುಲೆ, ಜ್ಯೋತಿರಾವ್ ಪುಲೆ ಹಾಗೂ ಎಳೆಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಹಿತಾಸಕ್ತಿ ಇಲ್ಲದೆ ಕೆಚ್ಚೆದೆಯಿಂದ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಖುದಿರಾಮ್ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಹಾಗೂ ನೇತಾಜಿ ಅವರ ಹೋರಾಟದ ಸಂಘರ್ಷ ಜೀವನದ ವಿಚಾರಗಳು ಅತ್ಯವಶ್ಯಕವಾಗಿದೆ ಎಂದು ಹೇಳಿದರು.ಶಿಬಿರದಲ್ಲಿ ಶರತ್ ಚಂದ್ರ ಚಟರ್ಜಿ ಅವರ ಅಧಿಕಾರ ಕಾದಂಬರಿ ಮತ್ತು ವಿದ್ಯಾರ್ಥಿಗಳು ರಾಜಕೀಯ ಸೇರ್ಬೇಕಾ? ಎಂತಹ ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವಂತ ವಿಷಯಗಳ ಬಗ್ಗೆ ಚರ್ಚೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಎಐಡಿಎಸ್‍ಒ ಜಿಲ್ಲಾ ಅಧ್ಯಕ್ಷ ಹಣಮಂತ ಎಸ್ ಎಚ್, ಉಪಾಧ್ಯಕ್ಷೆ ಸ್ನೇಹಾ ಕಟ್ಟೀಮನಿ, ಕಾರ್ಯದರ್ಶಿ ತುಳಜರಾಮ ಎನ್ ಕೆ, ವೆಂಕಟೇಶ ದೇವದುರ್ಗ, ಯಾದಗಿರಿ ಸಂಚಾಲಕರಾದ ಶಿಲ್ಪಾ ಬಿ ಕೆ , ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಹಾಗೂ ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ ಹಾಗೂ ಇತರರು ಉಪಸ್ಥಿತರಿದ್ದರು.