ಎಎಸ್‌ಐ ಗಾಯಿತ್ರಿಗೆ ಮುಖ್ಯಮಂತ್ರಿ ಪದಕ

ಕೋಲಾರ,ಮಾ.೨೬: ಕೆಜಿಎಫ್ ಪೊಲೀಸ್ ಜಿಲ್ಲೆಯ ಮಹಿಳಾ ಎಎಸ್‌ಐ ಎಸ್.ಗಾಯಿತ್ರಿ ಅವರ ೨೭ ವರ್ಷಗಳ ಉತ್ತಮ ಸೇವೆಯನ್ನು ಪರಿಗಣಿಸಿ ೨೦೨೦ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಸರ್ಕಾರವು ಆಯ್ಕೆ ಮಾಡಿದೆ.
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ವನಿತಾ ಸಹಾಯವಾಣಿಯಲ್ಲಿ ಠಾಣಾಧಿಕಾರಿಯಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಎಸ್.
ಗಾಯಿತ್ರಿ ಅವರು,೧೯೯೪ ರಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಸೇವೆಗೆ
ಸೇರಿ, ೨೦೦೪ರಲ್ಲಿ ಹೆಡ್‌ಕಾನ್ಸ್‌ಟೇಬಲ್ ಹುದ್ದೆಗೆ ಹಾಗೂ ೨೦೧೬ರಲ್ಲಿ ಎಎಸ್‌ಐ ಹುದ್ದೆಗೆ ಮುಂಬಡ್ತಿ ಹೊಂದಿದ್ದು, ಕೆಜಿಎಫ್ ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಠಾಣೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ, ಉತ್ತಮವಾದ ರೀತಿಯಲ್ಲಿ ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದಾರೆ. ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಸಂಬಂಧ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುವ ಇವರು, ಶಾಲಾ, ಕಾಲೇಜುಗಳ ಬಳಿ ರ್ಯಾಂಗಿಂಗ್ ಪಿಡುಗನ್ನು ಸಾಕಷ್ಟು ನಿಯಂತ್ರಣಗೊಳಿಸಲು, ಹೆಣ್ಣು ಮಕ್ಕಳಿಗೆ ಭಯವನ್ನು ಹೋಗಲಾಡಿಸಲು, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಕಲ್ಪಿಸಿ ನಿರ್ಭಯವಾಗಿ ವ್ಯಾಸಂಗ ಮಾಡಲು
ವಿದ್ಯಾರ್ಥಿನಿಯರಿಗೆ ಅನುವು ಮಾಡಿಕೊಡುವಲ್ಲಿ ಎಎಸ್‌ಐ ಗಾಯತ್ರಿ ಅವರ ಸೇವೆ ಅಪಾರವಾದದ್ದು. ವನಿತಾಸಹಾಯವಾಣಿಗೆ ಬರುವಂತಹ ಪತಿ, ಪತ್ನಿ ವೈಮನಸ್ಯ, ಕಿರುಕುಳದ ಪ್ರಕರಣಗಳಲ್ಲೂ ಸಾಕಷ್ಟು ಸಾವಧಾನವಾಗಿ ತಾಳ್ಮೆಯಿಂದ ಒಗ್ಗೂಡಿಸಿ, ಸಹಭಾಳ್ವೆಯಲ್ಲಿ ಮುಂದುವರೆಯಲು ಸಲಹೆ
ನೀಡಿ, ಕಾನೂನಿನ ತಿಳುವಳಿಕೆ ನೀಡಿ, ಬಹುಪಾಲು ಪತಿ, ಪತ್ನಿ ಪ್ರಕರಣಗಳನ್ನು ಕೌನ್ಸಿಲಿಂಗ್ ಮೂಲಕ ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ೨೭ ವರ್ಷಗಳ ಸುದೀರ್ಘವಾದ ಸೇವೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಎಸ್.ಗಾಯತ್ರಿ ಅವರ ಸೇವೆಯನ್ನು ಗುರುತಿಸಿ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರ ಶಿಪಾರಸ್ಸಿನ ಮೇರೆಗೆ ತಮಗೆ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿಎಂ ಪದಕ ವಿಜೇತೆ ಎಎಸ್‌ಐ ಗಾಯತ್ರಿ
ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಭಾಜನರಾಗಿರುವ ಎಎಸ್‌ಐ ಗಾಯತ್ರಿ ಅವರನ್ನು ಎಸ್‌ಪಿ ಇಲಕ್ಕಿಯಾ ಕರುಣಾಕರನ್, ಡಿವೈಎಸ್ಪಿ ಬಿ.ಕೆ.ಉಮೇಶ್, ಎಎಓ ಜಿ.ವಿಶ್ವನಾಥ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.