
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೨: ಆಮ್ ಆದ್ಮಿ ಪಕ್ಷದ ವತಿಯಿಂದ ಜನರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಎಎಪಿ ರಾಜಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 12ರಿಂದ ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಜನರ ಬಳಿ ಬನ್ನಿ ಮಾತಾಡೋಣ ಎಂಬ ಶೀರ್ಷಿಕೆಯೊಂದಿಗೆ ಸ್ಥಳೀಯ ನಾಗರೀಕರ ರೈತರ ಹಾಗೂ ಜನ ಸಾಮಾನ್ಯರ ಕುಂದು ಕೊರತೆಗಳನ್ನು ನೇರವಾಗಿ ತಿಳಿದುಕೊಳ್ಳಲು ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ವಡ್ಡಿನಹಳ್ಳಿಯಲ್ಲಿ ಇಂದು ಸಂಜೆ 4ಕ್ಕೆ ಸಂವಾದ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಚುನಾವಣೆಯ ಬಗ್ಗೆ ಜಿಲ್ಲೆಯ ಪದಾಧಿಕಾರಿಗಳ ಜೊತೆಗೆ ಸಂವಾದ ನಡೆಸಲಿದ್ದು ಇದರ ಜೊತೆಯಲ್ಲಿ ಹೊಸದಾಗಿ ಆಯ್ಕೆಗೊಂಡ ಜಿಲ್ಲಾ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಂವಾದದಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅದರಲ್ಲಿ ಪ್ರಮುಖವಾಗಿ ಶಿಕ್ಷಣದ ಗುಣಮಟ್ಟ ಸರಿ ಪಡಿಸದೇ ಏಳಿಗೆ ಸಾಧ್ಯವೇ, ಆರೋಗ್ಯ ವ್ಯವಸ್ಥೆ ಸರಿ ಪಡಿಸದೇ ಸಮಾಜ ಸದೃಢವಾಗಿರಲು ಸಾಧ್ಯವೇ, ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೆ ರೈತನ ಋಣ ತೀರಿಸುವುದು ಸಾಧ್ಯವೇ, ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದೆ, ಸಮಾಜದ ಏಳಿಗೆ ಸಾಧ್ಯವೇ, ಭ್ರಷ್ಟಾಚಾರ ತಾಂಡವಾಡುತ್ತಿದ್ದರೆ ಶಿಷ್ಟಾಚಾರದ ಜೀವನ ಸಾಧ್ಯವೇ, ಯುವಕರಿಗೆ ಅವಕಾಶ, ಉದ್ಯೋಗ, ಕಲ್ಪಿಸದೇ ದೇಶದ ಅಭಿವೃದ್ಧಿ ಸಾಧ್ಯವೆ ಹೀಗೆ ಹಲವಾರು ವಿಷಯಗಳು ಚರ್ಚಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಉಮಾ ಶಂಕರ್, ಶಿವಕುಮಾರಪ್ಪ, ಅರುಣ್ ಕುಮಾರ್, ಗಣೇಶ್ ದುರ್ಗದ, ಆದಿಲ್ ಖಾನ್, ಕೆ.ರವೀಂದ್ರ, ಕೆ.ಎಲ್.ರಾಘವೇಂದ್ರ, ಸುರೇಶ್, ಅಜಿತ್, ಬಸವರಾಜ್ ಇತರರು ಇದ್ದರು.