ಎಎನ್‌ಐ ದಾಳಿ-50 ಮಂದಿ ಬಂಧನ

ಕೋಲಾರ,ಸೆ,೨೩:ದೇಶದಾದ್ಯಂತ ಎಸ್.ಡಿ.ಪಿ.ಐ ಮತ್ತು ಪಿ.ಎಫ್,ಐ. ಕಚೇರಿಗಳ ಮೇಲೆ ಎಣ್.ಐ.ಎ ಸಂಸ್ಥೆ ದಾಳಿ ಮಾಡಿ ಮಂಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧಡೆ ಕಾರಣವಿಲ್ಲದೆ ತಮ್ಮ ನಾಯಕರನ್ನು ಬಂಧಿಸಿದ್ದಾರೆಂದು ಆರೋಪಿಸಿ ಪಿಎಫ್‌ಐ ಸಂಘಟನೆ ಮುಖಂಡರು, ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ೫೦ ಮಂದಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಪಿಎಫ್‌ಐ ಸಂಘಟನೆ ಮುಖಂಡರ ಬಂಧನ ಖಂಡಿಸಿ ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ೭೫ ಅನ್ನು ತಡೆದು ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಇಮ್ತಿಯಾಜ್ ನೇತೃತ್ವದಲ್ಲಿ ಅನೇಕ ಮಂದಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಐಎ ಸಂಸ್ಥೆಯವರು ಮಂಗಳೂರಿನಲ್ಲಿ ಪಿಎಫ್‌ಐ ರಾಷ್ಟ್ರೀಯ ಮತ್ತು ರಾಜ್ಯ ನಾಯಕರನ್ನು ಯಾವುದೇ ಕಾರಣ ನೀಡದೆ, ಯಾವೂದೇ ಅಪರಾಧದ ಸಾಕ್ಷಧಾರ ಇಲ್ಲದೆ ಏಕಾಏಕಿ ಬಂಧಿಸುತ್ತಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರು ಅನುಮತಿ ಪಡೆಯದೆ ಹೆದ್ದಾರಿಯಲ್ಲಿ ಪ್ರತಿಭಟಿಸುವುದು ಅಪರಾಧವಾಗಲಿದೆ ಕೊಡಲೇ ರಾಷ್ಟ್ರೀಯ ಹೆದ್ದಾರಿಯನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಡದಿದ್ದಾರೆ ಕಾನೂನು ಕ್ರಮ ಜರುಗಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಎಷ್ಟು ಹೇಳಿದರೂ ಕೇಳದೆ ಪ್ರತಿಭಟನಕಾರರು ಹೆದ್ದಾರಿ ತಡೆಯನ್ನು ಮುಂದುವರೆಸಿದಾಗ ನಗರಠಾಣೆ ಪಿ.ಎಸ್.ಐ. ಹರೀಶ್ ಸೇರಿದಂತೆ ಗ್ರಾಮಾಂತರ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಹೆದ್ದಾರಿಯನ್ನು ತೆರವು ಮಾಡಿಸಿ ೫೦ಕ್ಕೂ ಹೆಚ್ಚು ಪಿಎಫ್‌ಐ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡೆಸಿದರು.