ಎಇ ಬಹುರೂಪಿ ಮನೆ ಮೇಲೆ ಲೋಕಾಯುಕ್ತ ದಾಳಿ

ಅಥಣಿ /ಬೆಳಗಾವಿ :ಜೂ.29: ಅಥಣಿಯಲ್ಲಿ ಈ ಹಿಂದೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಶೇಖರ್ ಬಹುರೂಪಿ ಅವರ ಮೂರು ಮನೆಗಳ ಮೇಲೆ, ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಂಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಅವರ ಮನೆ ಹಾಗೂ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿರುವ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಮತೀರ್ಥ ನಗರದಲ್ಲಿ ಮೂರು ಅಂತಸ್ತಿನ ಐಷಾರಾಮಿ ಮನೆ ಇದೆ. ಬೆಳಿಗ್ಗೆಯಿಂದಲೇ ಅಲ್ಲಿ ದಾಖಲೆಗಳ ಶೋಧ ಶುರು ಮಾಡಲಾಗಿದೆ.

ಶೇಖರ ಬಹುರೂಪಿ ಪ್ರಸ್ತುತ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ “ಜೆಸ್ಕಾಂ” ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ‘ಹೆಸ್ಕಾಂ’ ಚಿಕ್ಕೋಡಿ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು.ಈ ಹಿಂದೆ 2019ರ ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಪ್ರವಾಹ ಪರಿಹಾರ ವಿತರಣೆಯಲ್ಲಿ ಅಕ್ರಮ ಎಸಗಿದ ಆರೋಪ ಅವರ ಮೇಲೆ ಕೇಳಿಬಂದಿತ್ತು. ಇದರಿಂದ ಅವರನ್ನು ಅಮಾನತ್ತು ಮಾಡಲಾಗಿತ್ತು
ಅಥಣಿಯಲ್ಲಿ ಸುಮಾರು 86 ಕೋಟಿ ರೂಗಳ ಹಗರಣಕ್ಕೆ ಸಂಬಂಧಿಸಿದಂತೆ ಆಗ ‘ಹೆಸ್ಕಾಂ’ನ ಐವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಅಥಣಿ ಉಪ ವಿಭಾಗದ 20 ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಶೇಖರ ಬಹುರೂಪಿ ಕೂಡ ಮುಖ್ಯ ಆರೋಪಿ ಆಗಿದ್ದರು.