ಎಇಇ ಕೆ.ಶಾಂತರಾಜ್:ಕೋವಿಡ್ ನಿಯಮ ಉಲ್ಲಂಘನೆ

ಮಾನ್ವಿ: ಜೂ.೦೭- ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತ ಸಾರ್ವಜನಿಕರು ಕೋವಿಡ್ ನಿಯಮ ಉಲ್ಲಂಘನೆ ಮಾಡದಂತೆ ನಿಯಂತ್ರಿಸುವುದು ಅಧಿಕಾರಗಳ ಕರ್ತವ್ಯವಾಗಿದೆ. ಆದರೆ ಇಲ್ಲೊಬ್ಬ ಅಧಿಕಾರಿ ತಾನೇ ಕೋವಿಡ್ ನಿಯಮ ಉಲ್ಲಂಘಿಸಿ ಬೇಜವಾಬ್ದಾರಿ ಮೆರೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಿರೇಕೊಟ್ನೆಕಲ್ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಶಾಂತರಾಜ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಅಧಿಕಾರಿಯಾಗಿದ್ದಾರೆ. ಪೋತ್ನಾಳ್ ವ್ಯಾಪ್ತಿಗೆ ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆ.ಶಾಂತರಾಜ್ ತಮ್ಮ ಸಿಬ್ಬಂದಿಗಳೊಂದಿಗೆ ಪೋತ್ನಾಳ್ ಗ್ರಾಮದ ರಸ್ತೆ ಬದಿಯ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸಿ ಬಂಡತನ ತೋರಿದ್ದಾರೆ.
ಸಂಪೂರ್ಣ ಲಾಕ್‌ಡೌನ್‌ನಲ್ಲಿ ತುರ್ತು ಸೇವೆಗಳು ಹೊರತುಪಡಿಸಿ ಎಲ್ಲಾವನ್ನು ಸಂಪೂರ್ಣ ಬಂದ್ ಮಾಡಲು ಆದೇಶ ಮಾಡಿದೆ. ಸಾರ್ವಜನಿಕರು ಇದನ್ನು ಚಾಚು ತಪ್ಪದೆ ಪಾಲಿಸುವ ಆದ್ಯ ಕರ್ತವ್ಯವಾಗಿದೆ. ಆದರೆ ಕೆಲ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ಅನಿಧಿಕೃತವಾಗಿ ಕದ್ದು ಮುಚ್ಚಿ ಹೋಟೆಲ್ ಡಾಬಾ, ಕಿರಾಣಿ ಅಂಗಡಿ ತೆಗೆದು ವ್ಯಾಪಾರ ನಡೆಸುತ್ತಿದ್ದಾರೆ. ಇದನ್ನು ತಡೆಯಲು ನಾನಾ ಇಲಾಖೆ ಅಧಿಕಾರಗಳನ್ನು ಕೋವಿಡ್ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಕರೋನಾ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ ತಾವೇ ಹೋಟೆಲ್ ನೊಳಗೆ ನುಗ್ಗಿ ಭರ್ಜರಿ ಉಪಹಾರ ಸೇವಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.
ಲಾಕ್‌ಡೌನ್ ಕೋವಿಡ್ ನಿಯಮ ಪಾಲನೆ ಮಾಡಬೇಕಾದ ಅಧಿಕಾರಿಗಳೇ ನಿಯಮ ಮುರಿದು ವರ್ತಿಸಿದರೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯ.