ಕಲಬುರಗಿ,ಏ.27: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಮೇಲೆ ನಿಗಾ ಇಡಲು ಕಲಬುರಗಿಯ ವಾರ್ತಾ ಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂ.ಸಿ.ಎಂ.ಸಿ)ಗೆ ಗುರುವಾರ ಜೇವರ್ಗಿ ವೆಚ್ಚ ವೀಕ್ಷಕ ವಿಪುಲ ಚವಡಾ ಭೇಟಿ ನೀಡಿ ಸಮಿತಿ ಕಾರ್ಯ ಪರಿಶೀಲಿಸಿದರು.
ಸ್ಥಳೀಯ ಕೇಬಲ್ ಟಿ.ವಿ ಪ್ರಸಾರ ಮತ್ತು ಪತ್ರಿಕೆ ವೀಕ್ಷಿಸಿದ ಅವರು ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ ವಹಿಸಬೇಕು. ಪ್ರತಿ ದಿನ ಪತ್ರಿಕೆ, ಸುದ್ದಿ ವಾಹಿನಿ, ಕೇಬಲ್ ಟಿ.ವಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತನ್ನು ಸಂಬಂಧಪಟ್ಟ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲು ಚುನಾವಣಾಧಿಕಾರಿ ಮತ್ತು ವೆಚ್ಚ ವೀಕ್ಷಕರಿಗೆ ವರದಿ ಸಲ್ಲಿಸಬೇಕು ಎಂದರು.
ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ಸಮಿತಿ ಕಾರ್ಯವೈಖರಿ ಬಗ್ಗೆ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿದರು.
ಸೋಷಿಯಲ್ ಮೀಡಿಯಾ ಸೆಲ್‌ಗೂ ಭೇಟಿ:
ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸೋಷಿಯಲ್ ಮೀಡಿಯಾ ಸೆಲ್‌ಗೂ ಭೇಟಿ ನೀಡಿದ ವೆಚ್ಚ ವೀಕ್ಷಕ ವಿಪುಲ್ ಚವಡಾ ಅವರು ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿರುವ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.