ಎಂ.ಬಿ ಪಾಟೀಲ್ ಅವರಿಗೆ ಸಿಎಂ ಸ್ಥಾನ ನೀಡಲು ಆಗ್ರಹ

ವಿಜಯಪುರ:ಮೇ.16: ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಹಾಗೂ ಸದ್ಯ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಿ ನಾಯಕರಲ್ಲೊಬ್ಬರಾಗಿರುವ ಡಾ. ಎಂ.ಬಿ ಪಾಟೀಲ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಸಮಾಜ ಸೇವಕ ಹಾಗೂ ಯುವ ಮುಖಂಡ ಮಂಜುನಾಥ್.ಎಸ್.ಕಟ್ಟಿಮನಿ ಅವರು ಬಲವಾಗಿ ಆಗ್ರಹಿಸಿದ್ದಾರೆ.
ಎಂ.ಬಿ ಪಾಟೀಲ್ ಅವರು ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೇರಲು ಅವರು ಬಹಳ ಪ್ರಮುಖ ಪಾತ್ರವಹಿಸಿದ್ದಾರೆ. ಹಗಲಿರುಳೆನ್ನದೇ ಪಕ್ಷದ ಏಳಿಗೆಗೆ ಶ್ರಮಿಸಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಅವರು ಜನಾನುರಾಗಿ ಕೆಲಸ ಮಾಡಿ, ಆ ಮೂಲಕ ಆಧುನಿಕ ಭಗೀರಥ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಉತ್ತರ ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ರಾಜ್ಯದ ಪ್ರಭಾವಿ ಹಾಗೂ ಜನಪ್ರಿಯ ಜನನಾಯಕರಲ್ಲೊಬ್ಬರಾಗಿರುವ ಬಸವಾದಿ ಶರಣರ ತತ್ವಗಳನ್ನು ತಮ್ಮ ನಡೆ ನುಡಿಗಳಲ್ಲಿ ಅಳವಡಿಸಿಕೊಂಡಿರುವ ಎಂ.ಬಿ ಪಾಟೀಲ್ ಅವರಿಗೆ ಸಿಎಂ ಸ್ಥಾನ ನೀಡಿದರೆ ಬಸವಣ್ಣ ಕಂಡ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸಿಎಂ ಸ್ಥಾನ ಕಲ್ಪಿಸುವ ಮೂಲಕ ನವ ಸಮಾಜ ನಿರ್ಮಾಣಕ್ಕೂ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಂ.ಬಿ ಪಾಟೀಲ್ ಅವರು ಎಲ್ಲ ಸಮುದಾಯಗಳ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ಅದರಲ್ಲೂ ಇವರು ದೀನ ದಲಿತ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದವರಾಗಿದ್ದಾರೆ. ಇಂಥವರು ಸಿಎಂ ಸ್ಥಾನಕ್ಕೇರಿದರೆ ನವ ಕರ್ನಾಟಕದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.