ಜಗಳೂರು.ಜೂ.೧: ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂ.ಎಸ್.ಪಿ.ಗೆ ಕಾಯ್ದೆಯನ್ನು ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್‌ಗೆ ಮನವಿ ಸಲ್ಲಿಸಿದರು.ಬುಧವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೋರಾಟ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಬೃಹತ್ ಪ್ರತಿಭಟನೆಯ ಮೂಲಕ ಗಾಂದಿ ವೃತ್ತ , ಹೊಸ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಕಚೇರಿಯ ಗೇಟ್‌ನ ಬಾಗಿಲು ಮುಚ್ಚಿ ಸರಕಾರದ ವಿರುದ್ದ ಘೋಷಣೆ ಕೂಗಿದರು.ಈ ವೇಳೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂ.ಎಸ್.ಪಿ.ಗೆ ಕಾಯ್ದೆಯನ್ನು ಜಾರಿಗೆ ತರಬೇಕು. ಈ ಕಾಯ್ದೆಯನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದ ಖರೀದಿದಾರರಿಗೆ ಕನಿಷ್ಠ 6 ರಿಂದ 1 ವರ್ಷ ಜೈಲು ಸಜಾ ಹಾಗೂ ದಂಡ ಮತ್ತು ಪರವಾನಿಗೆ ರದ್ದು ಎಂಬ ಕಾನೂನನ್ನು ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳ ಹಿಂದೆ ಬಿಪಿಎಲ್ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಗುರುತಿಸುವ ಮಾನ ದಂಡಗಳನ್ನು ರೂಪಿಸುತ್ತಾ, ಅದರಲ್ಲಿ ಮೊಬೈಲ್, ಮೋಟರ್‌ಬೈಕ್, ಟಿ.ವಿ. ಇರುವ ಆಗಿರಲಿಲ್ಲ. ಆದರೆ ಕಾಲ ಬದಲಾಗಿದೆ ಬಿಪಿಎಲ್ ಕುಟುಂಬಗಳು ಟಿ.ವಿ. ಮೊಬೈಲ್, ಮೋಟರ್ ಸೈಕಲ್, ಜಮೀನು ಹೊಂದಿರುತ್ತಾರೆ. ಆದ್ದರಿಂದ ಸರ್ಕಾರವು ಬಿಪಿಎಲ್ ಕುಟುಂಬಗಳು ಮಾನದಂಡವನ್ನ ಬದಲಾಯಿಸಬೇಕು ಎಂದು ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರವು ಅಕಾಲಿಕ ಮಳೆಗೆ ಹಾಗೂ ಸಿಡಿಲಿಗೆ ಬೆಳೆ ಮತ್ತು ಜೀವ ಹಾನಿ ಆಗುತ್ತಿದೆ. ಆದರೆ, ಸರ್ಕಾರದ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಇದುವರೆಗೂ ಬಂದಿಲ್ಲ ಮತ್ತು ವೈಜ್ಞಾನಿಕ ಪರಿಹಾರ ನೀಡಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.