ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ : ಕೆ.ಎಸ್.ಈಶ್ವರಪ್ಪ ವಿರುದ್ದ ಕಣಕ್ಕೆ!’ – ಆಯನೂರು ಮಂಜುನಾಥ್ ಘೋಷಣೆ

ಶಿವಮೊಗ್ಗ, ಎ. 4: ‘ವಿಧಾನ ಪರಿಷತ್ ಸ್ಥಾನಕ್ಕೆ ಇಷ್ಟರಲ್ಲಿಯೇ ರಾಜೀನಾಮೆ ನೀಡುತ್ತಿದ್ದೆನೆ. ಕೆ.ಎಸ್.ಈಶ್ವರಪ್ಪ ವಿರುದ್ದ ಚುನಾವಣಾ ಕಣಕ್ಕಿಳಿಯುತ್ತಿದ್ದೆನೆ’ ಎಂದು ಬಿಜೆಪಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಘೋಷಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಕುರಿತಂತೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದ ಅವರು, ‘ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತೆನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಆದರೆ ತಾವು ಚುನಾವಣಾ ಕಣಕ್ಕಿಳಿಯುವುದು ನಿಶ್ಚಿತ. ಬಿಜೆಪಿ ಪಕ್ಷ ಹಾಗೂ ನಾಯಕರ ಬಗ್ಗೆ ತಮಗೆ ಅಸಮಾಧಾನವಿಲ್ಲ.  ಆದರೆ ಕೆ.ಎಸ್.ಈಶ್ವರಪ್ಪರ ನಡವಳಿಕೆ ಬಗ್ಗೆ ಅಸಮಾಧಾನವಿದೆ. ಆ ಕಾರಣದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೆನೆ ಎಂದು ತಿಳಿಸಿದ್ದಾರೆ.ಕಾಂಗ್ರೆಸ್, ಜೆಡಿಎಸ್ ಅಥವಾ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬುವುದನ್ನು ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ‘ನಾನ್ಯಾವ ಲೆಕ್ಕ ಎಂದು ಅವರು ಕೇಳಿದ್ದಾರೆ. ಅವರ ಸವಾಲನ್ನು ಸ್ವೀಕರಿಸಿದ್ದೆನೆ. ನೀವಾಗಲಿ, ನಿಮ್ಮ ಮಗನಾಗಲಿ ತಮ್ಮೆದುರು ಕಣಕ್ಕಿಳಿಯಲಿ. ತಾವು ಏನೆಂಬುವುದನ್ನು ಚುನಾವಣೆಯಲ್ಲಿ ತೋರಿಸುತ್ತೆನೆ’ ಎಂದು ಕೆ.ಎಸ್.ಈಶ್ವರಪ್ಪ ವಿರುದ್ದ ಹರಿಹಾಯ್ದಿದ್ದಾರೆ.ಕಳೆದ 32 ವರ್ಷಗಳಿಂದ ಶಿವಮೊಗ್ಗದಿಂದ ಆಯ್ಕೆಯಾಗಿರುವ ಕೆ.ಎಸ್.ಈಶ್ವರಪ್ಪ ಅವರು, ಜನರ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ದಿಗೆ ಸ್ಪಂದಿಸುವ ಕಾರ್ಯ ನಡೆಸಿಲ್ಲ. ಶಿವಮೊಗ್ಗದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳಿಗೆ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಕಾರಣಕರ್ತರಾಗಿದ್ದಾರೆ. ಹೇಳಿಕೊಳ್ಳುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.ಯಡಿಯೂರಪ್ಪಗೆ ಸಾಕಷ್ಟು ಬಾರಿ ಈಶ್ವರಪ್ಪ ಅಪಮಾನ ಮಾಡಿದ್ದಾರೆ. ಸಿಎಂಗೆ ಆಗಿದ್ದಾಗ ಸೂಕ್ತ ಗೌರವ ಕೊಡಲಿಲ್ಲ. ಅವರು ಜೈಲಿಗೆ ಹೋದಾಗ, ತಾವಾಗಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು. ಈಶ್ವರಪ್ಪರ ಹೇಳಿಕೆಯಿಂದ ಪಕ್ಷಕ್ಕೆ ಸಾಕಷ್ಟು ಬಾರಿ ಮುಜುಗರ ಹಾಗೂ ಡ್ಯಾಮೇಜ್ ಆಗಿದೆ ಎಂದು ಆರೋಪಗಳ ಸುರಿಮಳೆಗೈದರು.
ಈಗಾಗಲೇ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡಲು ಸಿದ್ದ ಮಾಡಿಕೊಂಡಿದ್ದಾರೆ. ಲಕ್ಷ್ಮೀಪುತ್ರರ ಎದುರು ಈ ಬಡವ ನಿಂತುಕೊಳ್ಳಲಿದ್ದಾನೆ ಎಂದು ಕೆ.ಎಸ್.ಈಶ್ವರಪ್ಪ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ.