ಎಂ.ಎನ್. ದೇಸಾಯಿ ಕಾಲೇಜಿನಲ್ಲಿ ವಿಶಿಷ್ಟ ರಕ್ಷಾ ಬಂಧನ ಆಚರಣೆ

ಕಲಬುರಗಿ: ಸೆ.1:ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಸೀಮಿತಗೊಳಿಸುವುದು ಸರ್ವೇ ಸಾಮಾನ್ಯ, ಆದರೆ ಇಲ್ಲೊಂದು ಕಾಲೇಜಿನ ಮುಂಭಾಗದಲ್ಲಿ ತರಹೇವಾರಿ ರಂಗೋಲಿ ಹಾಕಿ, ನಾನಾ ಬಗೆಯ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ರಾಖಿಗಳು, ಪದವಿ ವಿದ್ಯಾರ್ಥಿಗಳಿಗೆ ಹೃದಯ ತುಂಬಿದ ಸ್ವಾಗತಿಸಿದ್ದು ನೋಡಿದರೆ ನಿಜಕ್ಕೂ ಒಡಹುಟ್ಟಿದ ಅಣ್ಣ ತಂಗಿಯರಂತೆ ಪರಸ್ಪರ ಸೋದರತೆ ಭಾವಕ್ಕೆ ಸಾಕ್ಷಿಯಾಯಿತು.

ಹೌದು, ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಎಂ.ಎನ್. ದೇಸಾಯಿ ವಾಣಿಜ್ಯ, ಕಲಾ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಕ್ಷಾಬಂಧನ ಹಬ್ಬದ ಅಂಗವಾಗಿ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಿಂದೆದ್ದು ಒಡಹುಟ್ಟಿದ ಭಾವ, ಸೋದರತೆ, ಅಣ್ಣ ತಂಗಿಯ ಸುಮಧುರ ಸಂಬಂಧ ಬೆಸೆಯುವಂತೆ ಸುಮಧುರ ಕ್ಷಣಗಳು ಕಂಡುಬಂದವು.ಇದಕ್ಕೆ ಇಡೀ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಕೂಡ ಹೊರತಾಗಿರಲಿಲ್ಲ. ವಿದ್ಯಾರ್ಥಿಗಳಷ್ಟೇ ಏಕೆ ತಾವು ಅಣ್ಣ ತಂಗಿಯರಂತೆ ಕೂಡಿ ಬಾಳೋಣ ಎಂಬಂತೆ ಎಲ್ಲರಿಗೂ ರಾಖಿ ಕಟ್ಟಿ ಬಾಂದವ್ಯ ಬೆಸೆದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಭೀಮಾಶಂಕರ ಎಂ. ಫಿರೋಜಾಬಾದ್, ಸದೃಢ ದೇಶ ನಿರ್ಮಾಣಕ್ಕೆ ಗಟ್ಟಿ ಬಾಂಧವ್ಯ ಅಗತ್ಯ, ಯುವಕ-ಯುವತಿಯರು ಅಣ್ಣ ತಂಗಿಯರಂತೆ ಪ್ರೀತಿ, ವಿಶ್ವಾಸದಿಂದ ಬಾಳಿ ಬದುಕಿದರೆ ಸುಂದರ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.

ನಾಲ್ಕು ಚಕ್ರ ತಂಡದ ಮುಖ್ಯಸ್ಥೆ, ಸಮಾಜ ಸೇವಕಿ ಮಾಲಾ ಕಣ್ಣಿ, ವಿದ್ಯಾರ್ಥಿಗಳಾದವರು ಎಲ್ಲ ಅಕ್ಕ ತಂಗಿ, ಅಣ್ಣ ತಮ್ಮಂದಿರಂತೆ ಕೂಡಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕøತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಿರುವ ಕಾಲೇಜಿನ ಕೆಲಸ ನಿಜಕ್ಕೂ ಅಭಿನಂದಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಅಧ್ಯಕ್ಷ ಸಂದೀಪ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ವಿ.ಎಂ. ಹಿರೇಮಠ, ಕನ್ನಡ ಪ್ರಾಧ್ಯಾಪಕಿ ಪ್ರಿಯಾಂಕ್ ಕರಣಿಕ ರಕ್ಷಾ ಬಂಧನದ ವೈಶಿಷ್ಟತೆ ಬಗ್ಗೆ ಉಪನ್ಯಾಸ ನೀಡಿದರು. ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಆನಂದತೀರ್ಥ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕರಾದ ಅನ್ನಪೂರ್ಣ ರಡ್ಡಿ, ಶರಣಪ್ಪ ಪೂಜಾರಿ, ಅನ್ನಪೂರ್ಣ ಪಸಾರ, ಕಾಶೀಬಾಯಿ ವಗ್ಗೆನೂರ, ರಾಧಿಕಾ ಗುತ್ತೇದಾರ್, ಅಂಬಿಕಾ ಕೋಬಾಳ, ಅನಸೂಯರಡ್ಡಿ, ಎನ್‍ಎಸ್ ಎಎಸ್ ಅಧಿಕಾರಿ ಮಂಜುನಾಥ ಬನ್ನೂರ್ ಮತ್ತಿತರರಿದ್ದರು.