ಎಂ.ಎಂ.ಹಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ

ಮರಿಯಮ್ಮನಹಳ್ಳಿ ಏ 16 : ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 130 ನೇ ಜಯಂತಿಯನ್ನು ಪಟ್ಟಣದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು.
ಪಟ್ಟಣ ಠಾಣೆಯ ಪಿ.ಎಸ್.ಐ.ಶಿವಕುಮಾರ್‍ರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್‍ರು ಸಂವಿಧಾನದ ಮೂಲಕ ನೀಡಿದ್ದಾರೆ. ಸರ್ವರಿಗೂ ಶಿಕ್ಷಣ ಸಿಗಬೇಕು ಎಂಬುದು ಡಾ.ಬಿ.ಆರ್. ಅಂಬೇಡ್ಕರ್‍ರ ಆಶಯವಾಗಿತ್ತು. ಅವರ ಆಶಯವನ್ನು ಈಡೇರಿಸಲು ಎಲ್ಲರಿಗೂ ಉತ್ತಮ ಶಿಕ್ಷಣ ದೊರಕಿಸುವಂತೆ ನಾವೆಲ್ಲರೂ ಶ್ರಮಿಸೋಣ ಎಂದರು. ಅಂಬೇಡ್ಕರರು ತಮ್ಮ ಧ್ಯೇಯವಾಕ್ಯ ಶಿಕ್ಷಣ, ಸಂಘಟನೆ ಹೋರಾಟ ಇವುಗಳಿಂದ ನಮ್ಮೆಲ್ಲರ ಹಕ್ಕುಗಳನ್ನು ಪಡೆಯಲು ಸಾಧ್ಯವೆಂಬುದನ್ನು ಜೀವನದುದ್ದಕ್ಕೂ ಪ್ರತಿಪಾದನೆ ಮಾಡುತ್ತ ಬಂದಿದ್ದಾರೆ. ಅವರು ಸಮುದಾಯದ ಕಟ್ಟಕಡೆಯ ಮನುಷ್ಯನಿಗೂ ನ್ಯಾಯ ಸಿಗುವಂತಹ ಸಂವಿಧಾನ ನೀಡಿದ್ದಾರೆ ಇದರಿಂದಾಗಿ ಇಂದು ಇಡೀ ವಿಶ್ವವೇ ಅವರನ್ನು ಕೊಂಡಾಡುತ್ತಿದೆ ಎಂದರು.
ಮತ್ತೋರ್ವ ಅತಿಥಿ ಪ್ರೋಬೇಷನರಿ ಪಿ.ಎಸ್.ಐ. ನಾರಾಯಣಸ್ವಾಮಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ನಮಗೆಲ್ಲರಿಗೂ ಬೇಕಾಗಿರುವದು ಸಾಮಾಜಿಕ ಸ್ವಾತಂತ್ರ್ಯ. ಸಂವಿಧಾನದ ಮೂಲಕ ನಮ್ಮಜನರಿಗೆ ಸಾಮಾಜಿಕ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರರು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭೀಮಾ ನಾಯ್ಕ, ಎಲ್.ಸುರೇಶ್, ಕಲಾವಿದ ಬಿ.ಸರದಾರ, ಯುವ ಮುಖಂಡ ವಿರೂಪಾಕ್ಷ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಎಲ್.ಮಂಜುನಾಥ, ಪಟ್ಟಣ ಪಂಚಾಯಿತಿ ಸದಸ್ಯ ಎಸ್.ನವೀನ್, ಬಿ.ಆನಂದ, ಮುಖಂಡರಾದ ಗರಗ ಪ್ರಕಾಶ್, ಎಲ್.ಸಣ್ಣ ದುರುಗಪ್ಪ, ವಿ.ಶಿವಕುಮಾರ್. ಎಲ್.ವಿಶ್ವ, ಎ.ದೇವೇಂದ್ರ, ಎಲ್.ಸ್ವಾಮಿ, ಹಲಗಿ ನಿಂಗಮ್ಮ, ವಿ.ಸೋಮವ್ವ, ಎಲ್. ದೊಡ್ಡ ಸೋಮವ್ವ, ಗಾಳೆಪ್ಪರ ಹನುಮವ್ವ, ಎ.ಸೋಮವ್ವ ಹಾಗೂ ಇತರರು ಇದ್ದರು.