ಎಂ.ಈರಣ್ಣ ವೃತ್ತದ ತರಕಾರಿ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಸ್ಥಳಾಂತರಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ

ರಾಯಚೂರು.ಆ.೩- ನಗರದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ವ್ಯಾಪಾರಸ್ಥರನ್ನು ಹಾಗೂ ರೈತರನ್ನು ಮತ್ತು ವಿವಿಧ ನಗರದ ಬಡಾವಣೆಗಳಲ್ಲಿ ವ್ಯಾಪಾರ ಮಾಡುವ ತರಕಾರಿ ವ್ಯಾಪಾರಸ್ಥರನ್ನು ಮುಖ್ಯ ಉಸ್ಮಾನೀಯ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘ ಉಸ್ಮಾನೀಯ ತರಕಾರಿ ಮಾರುಕಟ್ಟೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ನಗರದ ಉಸ್ಮಾನೀಯ ತರಕಾರಿ ಮಾರುಕಟ್ಟೆ ಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಟ್ಟೆ ಬಜಾರ್,ಭಗತ್ ಸಿಂಗ್ ವೃತ್ತ ಎಕ್ ಮಿನಾರ್ ವೃತ್ತ,ಮಹಿಳಾ ಸಮಾಜ ಮಾರ್ಗವಾಗಿ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರೋನಾ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಗರದ ಎಲ್ಲಾ ಬಡಾವಣೆಗಳಲ್ಲಿ ತರಕಾರಿ ಮಾರಾಟ ಮಾಡಲು ಜಿಲ್ಲಾಡಳಿತ ಹಾಗು ನಗರಸಭೆ ಸೂಚನೆ ಮಾಡಿದ್ದರು.ಅವರ ಸೂಚನೆಯಂತೆ ಉಸ್ಮಾನೀಯ ತರಕಾರಿ ಮಾರಾಟಗಾರರು ಹಾಗೂ ರೈತ ಮಾರುಕಟ್ಟೆಯ ರೈತರು ನಗರದ ವಿವಿಧ ಬಡಾವಣೆಗಳಲ್ಲಿ ಕುಳಿತು ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಸೋಂಕು ಕಡಿಮೆಯಾದ ಮೇಲೆ ನಗರದ ಎಲ್ಲಾ ಬಡಾವಣೆಗಳ ವ್ಯಾಪಾರಸ್ಥರು,ರೈತರು ಉಸ್ಮಾನೀಯ ತರಕಾರಿ ಮಾರುಕಟ್ಟೆಗೆ ಬಂದು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.ಆದರೆ ಎಂ.ಈರಣ್ಣ ವೃತ್ತದಲ್ಲಿ ರೈತರನ್ನು ಹಾಗೂ ವ್ಯಾಪಾರಸ್ಥರನ್ನು ವ್ಯಾಪಾರ ಮಾಡಲು ಮುಂದುವರೆಸಿರುವ ನಗರಸಭೆ ಪೌರಾಯುಕ್ತರು ಹಾಗೂ ಆ ವಾರ್ಡ್ ನ ನಗರಸಭೆ ಸದಸ್ಯ ಬಲವಂತದಿಂದ ಕೂಡಿಸಿ ಯಾರು ಬರುತ್ತಾರೆ ನೋಡುತ್ತೇನೆಂದು ತರಕಾರಿ ಮಾರಾಟಗಾರರಿಗೆ ದಮ್ಮಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ೧೧ ತಿಂಗಳುಗಳಿಂದ ಹಿಂದಿನ ಜಿಲ್ಲಾಧಿಕಾರಿಗಳಿಗೆ ನಗರಸಭೆ ಪೌರಾಯುಕ್ತರಿಗೆ ಸಾಕಷ್ಟು ಬಾರಿ ಸ್ಥಳಾಂತರಿಸಲು ಮನವಿ ಮಾಡಿದರೂ ರಾಜಕೀಯ ಒತ್ತಡದಿಂದ ಹಾಗೂ ಆ ಬಡಾವಣೆಯ ನಗರಸಭೆ ಸದಸ್ಯ ಕುಮ್ಮಕ್ಕಿನಿಂದ ತರಕಾರಿ ವ್ಯಾಪಾರಸ್ಥರು ಹಾಗೂ ರೈತರ ಎಂ.ಈರಣ್ಣ ಸರ್ಕಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ದೂರಿದರು.
ನಗರದ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದರೂ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಪಾದಚಾರಿಗಳಿಗೆ ಹಾಗೂ ಸಿಟಿ ಬಸ್ ಸಂಚಾರಕ್ಕೂ ಬಹಳ ತೊಂದರೆ ಯಾಗುತ್ತಿದ್ದರೂ ನಗರಸಭೆ ಪೌರಾಯುಕ್ತರು ಮೂಕ ಪ್ರೇಕ್ಷಕರಾಗಿ ನೋಡುತ್ತಿರುವುದು ಖಂಡನೀಯ,ದಿನನಿತ್ಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಒಂದಿಲ್ಲ ಒಂದುರೀತಿಯಿಂದ ಅಪಘಾತಗಳು ಸಂಭವಿಸುತ್ತಿವೆ.ನಗರಸಭೆ ಪೌರಾಯುಕ್ತರು ಪುರಸಭೆ ಕಾಯ್ದೆಯಡಿಯಲ್ಲಿ ನಗರವನ್ನು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡದಿರಲು ಶೋಚನಿಯ ನಗರಸಭೆ ಸದಸ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿಕ್ಕೆ ಪೌರಾಯುಕ್ತರು ಏಕೆ ಹಿಂದೇಟು ಹಾಕುತ್ತಿದ್ದಾರೆ ಕಾರಣಗಳೇನು ? ಎಂ.ಈರಣ್ಣ ವೃತ್ತದಲ್ಲಿ ವ್ಯಾಪಾರ ಮಾಡುವ ರೈತರಿಗೆ ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಕಾನೂನು ಅಡಿಯಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು.ನಗರಸಭೆ ಸದಸ್ಯ ದೌರ್ಜನ್ಯದಿಂದ ನಗರಸಭೆಗೆ ಬರುವ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಆದಾಯ ಕುಂಠಿತವಾಗಿದೆ.ಈ ಎಲ್ಲಾ ಕಾರಣಗಳಿಂದ ಎಂ.ಈರಣ್ಣ ವೃತ್ತದಲ್ಲಿ ವ್ಯಾಪಾರ ಮಾಡುವವರನ್ನು ಹಾಗೂ ರೈತರನ್ನು ಕೂಡಲೇ ಉಸ್ಮಾನೀಯ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎನ್.ಮಹಾವೀರ,ಕಾರ್ಯದರ್ಶಿ ಪ್ರಭು ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.