ಎಂ.ಇ.ಎಸ್. ಕಿಡಿಗೇಡಿತನ ನಿಭಾಯಿಸುತ್ತೇವೆ: ಸಿ.ಎಂ.

ಹುಬ್ಬಳ್ಳಿ, ಮೇ5: ಎಂ.ಇ.ಎಸ್. ಒಂದು ಕಿಡಿಗೇಡಿಗಳ ಸಂಘಟನೆ, ಅದನ್ನು ನಾವು ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಇ.ಎಸ್. ಚುನಾವಣೆ ವೇಳೆಗೆ ಜನರ ಮನಸ್ಸು ಕೆಡಿಸುವ ಗಿಮಿಕ್ ಮಾಡುತ್ತದೆ, ಬೆಳಗಾವಿ ಜನರಿಗೆ ಇದೆಲ್ಲ ಗೊತ್ತಿದೆ, ಅವರೇ ಉತ್ತರ ಕೊಡುತ್ತಾರೆ ಎಂದು ನುಡಿದರು.
ಪ್ರಧಾನಿಯಾದವರು ಜನರ ಬಳಿ ಹೋಗಬಾರದು, ಜನರ ಭಾವನೆ ತಿಳಿದುಕೊಳ್ಳಬಾರದರು, ದಿಲ್ಲಿಯಲ್ಲೇ ಇರಬೇಕು, ಹಳ್ಳಿಗೆ ಹೋದರೆ ಅವರು ಪ್ರಧಾನಿ ಅಲ್ಲ ಎನ್ನುವುದು ಕಾಂಗ್ರೆಸ್‍ನ ಹಳೆಯ ವಿಚಾರಧಾರೆ.
ಸಿದ್ಧರಾಮಯ್ಯ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದು ಅದರಿಂದ ಹೊರಬರಲು ಅವರಿಗೂ ಸಾಧ್ಯವಿಲ್ಲ. ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತದೆ ಎಂದ ಸಿ.ಎಂ. ನಮ್ಮ ಪ್ರಧಾನಿ ಕಾಂಗ್ರೆಸ್‍ನ ಪ್ರಧಾನಿ ರೀತಿಯೇ ಇರಬೇಕು ಎಂದೇನೂ ಇಲ್ಲ ಎಂದು ಕುಟುಕಿದರು.
ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅತಿಹೆಚ್ಚು ಆತ್ಮಹತ್ಯೆಗಳಾಗಿದ್ದವು. ಆವಾಗ ಮನ್‍ಮೋಹನ್ ಸಿಂಗ್, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿದ್ದರೇ? ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನ ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ ಎಂದು ನುಡಿದರು.
ಕಾಂಗ್ರೆಸ್‍ನ ಭಜರಂಗದಳ ನಿಷೇಧ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಕಾಂಗ್ರೆಸ್‍ನ ಪ್ರಣಾಳಿಕೆ ನೋಡಿ ಬಿಜೆಪಿ ಹೆದರಿದೆ ಎನ್ನುವುದು ಹಾಸ್ಯಾಸ್ಪದ, ಎಲ್ಲಿಯವರೆಗೆ ಕಾಂಗ್ರೆಸ್ ನವರು ಪಿ.ಎಫ್.ಐ., ಎಸ್.ಡಿ.ಪಿ.ಐ. ಅನ್ನು ಸಂತೋಷಪಡಿಸುವ ಯತ್ನದಲ್ಲಿರುತ್ತಾರೋ ಅಲ್ಲಿಯವರೆಗೂ ಭಜರಂಗದಳದ ವಿಚಾರ ಜನರ ಮಧ್ಯೆ ಇರುತ್ತದೆ ಎಂದು ಅವರು ಹೇಳಿದರು.
ಲಿಂಗಾಯತರ ಕುರಿತಂತೆ ಬಿ.ಎಲ್. ಸಂತೋಷ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಲು ಸಿ.ಎಂ. ನಿರಾಕರಿಸಿದರು.