ಎಂಸಿಸಿ ಬಿ ಬ್ಲಾಕ್ ನಲ್ಲಿ ಪ್ಲಾಸ್ಟಿಕ್ ಬಳಕೆಗೆ ಗುಡ್ ಬೈ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೩೦: ಪ್ಲಾಸ್ಟಿಕ್ ಮುಕ್ತ ಅಂಗಡಿಗಳಿಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಪ್ರಶಂಸನೀಯ ಪತ್ರ ನೀಡಲಾಯಿತು. ದಾವಣಗೆರೆ ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ಈ ಪತ್ರ ವಿತರಿಸಲಾಯಿತು. ಯಾವ ಅಂಗಡಿಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ರಹಿತ ವ್ಯಾಪಾರ ವಹಿವಾಟು ಹಾಗೂ ಬಟ್ಟೆಯಿಂದ ರೂಪಿಸಲಾದ ಕವರ್ ಸೇರಿದಂತೆ ಇತರೆ ವಸ್ತುಗಳನ್ನು ಸಂಪೂರ್ಣ ಬಳಕೆ ಮಾಡಿದ ಅಂಗಡಿಯವರಿಗೆ ಈ ಪತ್ರವನ್ನು ಕೊಡ ಮಾಡಲಾಯಿತು. ಬಟ್ಟೆ ಅಂಗಡಿಗಳು, ದಿನಸಿ ಸೇರಿದಂತೆ ಇತರೆ ಅಂಗಡಿಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್ ಗಳಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಆದರೆ ಎಂಸಿಸಿ ಬಿ ಬ್ಲಾಕ್ ನಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅಂಗಡಿಯವರು ಸಹ ಇದಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಮುನ್ನ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಮಾತ್ರವಲ್ಲ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಇದಕ್ಕೆ ವ್ಯಾಪಾರಿಗಳು ಹಾಗೂ ಜನರು ಸ್ಪಂದಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್ ಗಳಿಗಿಂತ ಈ ವಾರ್ಡ್ ನಲ್ಲಿಯೇ ಹೆಚ್ಚಿನ ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿಲ್ಲ. ಬಟ್ಟೆ ಹಾಗೂ ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಿ ರೂಪಿಸಲಾಗಿರುವ ಕವರ್ ಬಳಕೆ ಮಾಡುತ್ತಿರುವುದು ಇಲ್ಲಿನ ಸ್ಪೆಷಾಲಿಟಿ. ಇಂದು ಗಡಿಗುಡಾಳ್ ಮಂಜುನಾಥ್, ಹೆಲ್ತ್ ಇನ್ ಸ್ಪೆಕ್ಟರ್ ಎಂ. ಸಿ. ಲಕ್ಷ್ಮಿ, ದಪೇದಾರ್ ರಮೇಶ್ ಅವರು ಅಂಗಡಿ ಮಾಲೀಕರಿಗೆ ಪ್ರಶಂಸನೀಯ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್, ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಪರಿಸರಕ್ಕೆ ಹಾನಿಕರವಾದದ್ದು. ಪ್ಲಾಸ್ಟಿಕ್ ಬಳಕೆಯಿಂದ ವಾತಾವರಣ, ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಪ್ರಾಣಿ, ಪಕ್ಷಿಗಳೂ ಸೇರಿದಂತೆ ಎಲ್ಲರಿಗೂ ಸಮಸ್ಯೆ ಉಂಟು ಮಾಡುತ್ತದೆ. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಬೇಕಾದರೆ ಎಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ದಾವಣಗೆರೆಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಸರ್ಕಾರವು ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ. ಆದರೂ ಕೆಲವರು ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾನುಕೂಲಗಳು ಹಾಗೂ ಪರಿಸರ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಜನರಿಗೆ ಮನದಟ್ಟು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕಡಿಮೆಯಾಗುತ್ತಿದೆ. ಕೆಲವೆಡೆ ಜನರು ಉತ್ತಮ ಸ್ಪಂದನೆ ಮಾಡುತ್ತಿದ್ದಾರೆ. ಅಲ್ಲೋ ಇಲ್ಲೋ ಎಂಬಂತೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ. ಜನರೂ ಸಹ ಇದನ್ನು ಅರ್ಥಮಾಡಿಕೊಂಡು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದರೆ ಒಳ್ಳೆಯದು ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದರು.