ಎಂಸಿಎಫ್‍ನಿಂದ ಸರಕಾರಿ ಶಾಲೆಗೆ ಪೀಠೋಪಕರಣಗಳ ಕೊಡುಗೆ

ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.11: ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಂಗಾಪುರ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಲಿಮಿಟೆಡ್ ವತಿಯಿಂದ ಅಂದಾಜು 3.5 ಲಕ್ಷದ ಪೀಠೋಪಕರಣಗಳನ್ನು ಸಿ.ಎಸ್.ಆರ್. ಯೋಜನೆಯಡಿ ಶುಕ್ರವಾರದಂದು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಅವರು ಮಾತನಾಡಿ, ಸರಕಾರಿ ಶಾಲೆಗಳು ತಾಂತ್ರಿಕವಾಗಿ ಮತ್ತು ಅಗತ್ಯ ಸಲಕರಣೆಗಳಿಂದ ಉನ್ನತ ದರ್ಜೆಗೆ ಏರಬೇಕು. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರವು ಸಾಕಷ್ಟು ಅನುದಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸಾರ್ವಜನಿಕರು ಹಾಗೂ ದಾನಿಗಳು ಕೂಡ ಸರಕಾರಿ ಶಾಲೆಗೆ ನೆರವು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಲಿಮಿಟೆಡ್ ನಮ್ಮ ಶಾಲೆಗೆ 15 ಬೆಂಚು, 4 ಮೇಜು, 5 ಕಚೇರಿ ಕುರ್ಚಿ, 4 ಕಪಾಟು, 2 ಅಲಮಾರಿ, 8 ಗ್ರೀನ್ ಬೋರ್ಡ್, 6 ಕಲಿನಲಿ ಕುರ್ಚಿ, 30 ಸಾಧಾರಣ ಕುರ್ಚಿಗಳು ಸೇರಿದಂತೆ ಅಂದಾಜು 3 ಲಕ್ಷ 50 ಸಾವಿರ ರೂ. ವೆಚ್ಚದ ಸಲಕರಣೆಗಳನ್ನು ನೀಡಿದೆ.
ಮಕ್ಕಳಿಗೆ ಅತ್ಯಗತ್ಯವಾಗಿದ್ದ ಸಾಮಾಗ್ರಿಗಳನ್ನು ನೀಡುವ ಮೂಲಕ ಗ್ರಾಮೀಣ ಮಟ್ಟದ ಸರಕಾರಿ ಶಾಲೆಯ ಉನ್ನತೀಕರಣಕ್ಕೆ ನೆರವಿನ ಹಸ್ತ ಚಾಚಿದ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಲಿಮಿಟೆಡ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ಸ್ ಲಿಮಿಟೆಡ್‍ನ ಡಿಜಿಎಂ ಸತೀಶ್ ಆರ್., ಪ್ರಾಂತಿಯ ವ್ಯವಸ್ಥಾಪಕ ಅಮರನಾಥ ರೆಡ್ಡಿ, ವ್ಯವಸ್ಥಾಪಕ ಮಹೇಶ ಡಿ.ಕೆ. ಅಧಿಕೃತ ಗೊಬ್ಬರ ಮಾರಾಟಗಾರರು ಎಂ.ಸಿ.ಎಫ್. ಸುರೇಶ, ಮುಖ್ಯಗುರುಗಳಾದ ಕೊಟ್ರೇಶ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.