ಎಂವಿಕೆ ಡೇರಿ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರಾತಿ

ಕೋಲಾರ,ಆ,೯- ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ಹಾಲು ಸಹಕಾರ ಸಂಘಗಳ ಒಕ್ಕೂಟದ ಪಿತಮಹಾ ದಿವಂಗತ ಎಂ.ವಿ.ಕೃಷ್ಣಪ್ಪನವರ ಸ್ಮರಣಾರ್ಥ ಮೆಗಾ ಡೇರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ೨೦೦ ಕೋಟಿ ರೂ ಮಂಜೂರಾತಿಗೆ ಅನುಮತಿಸಿದೆ ಎಂದು ಒಕ್ಕೂಟದ ತಾಲ್ಲೂಕು ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು.
ನಗರದ ಟಮಕಾದ ಹಾಲು ಸಹಕಾರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ದಿ.ಡಿ.ಕೆ.ರವಿ ಆಡಳಿತದಲ್ಲಿ ಹಾಲು ಒಕ್ಕೂಟಕ್ಕೆ ಹೋಳಲಿ ಬಳಿ ೫೦ ಎಕರೆ ಜಾಗ ಮಂಜೂರು ಮಾಡಿದ್ದರು. ಇದನ್ನು ಕೆಲವರು ಒತ್ತುವರೆ ಮಾಡಿ ಕೊಂಡಿದ್ದರು. ಎಲ್ಲಾ ನಿರ್ದೇಶಕರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಒತ್ತುವರಿ ತೆರವು ಮಾಡಿಸಲು ಸುಮಾರು ಒಂದು ತಿಂಗಳ ಕಾಲ ಹೋರಾಟ ಮಾಡಿ ಈ ಜಾಗದಲ್ಲಿ ೧೦ ಬೋರವೆಲ್ ಹಾಕಲಾಗಿದೆ. ೪೫ ಎಕರೆ ಜಾಗದಲ್ಲಿ ೧೨ ಮೆಗಾವ್ಯಾಟ್ ಸೋಲರ್ ಪ್ಲಾಂಟೇಷನ್ ಮಾಡಿದೆ, ಸುಮಾರು ೬೦ ಕೋಟಿ ಮಂಜೂರು ಮಾಡಲಾಗಿದೆ. ಇದರಿಂದ ಒಕ್ಕೂಟಕ್ಕೆ ಸುಮಾರು ಒಂದೂವರೆ ಕೋಟಿ ರೂ ವಿದ್ಯುತ್ ವೆಚ್ಚ ಉಳಿಕೆಯಾಗುವ ಜೊತೆಗೆ ವಿದ್ಯುತ್ ಉತ್ಪಾದನೆಯಲ್ಲಿ ವರ್ಷಕ್ಕೆ ೧೫ ಕೋಟಿ ಲಾಭ ನಿರೀಕ್ಷಿಸಲಾಗಿದೆ, ಉಳಿದ ೫ ಎಕರೆ ಜಾಗದಲ್ಲಿ ಹಾಲಿನ ಪ್ಯಾಕಿಂಗ್ ಘಟಕಕ್ಕೆ ಮೀಸಲಿಡಲಾಗಿದೆ ಎಂದು ಹೇಳಿದರು.ಹಾಲು ಉತ್ಪಾದಕರ ಸಹಕಾರ ಸಂಘಗಳ ಸುಧಾರಣೆಗೆ ೨೩ ಕಾರ್ಯಕ್ರಮ ರೂಪಿಸಿದೆ ಎಂದು ವಿವರಿಸಿದರು.
ಹಾಲು ಸಂಘಗಳ ಅಭಿವೃದ್ದಿಗೆ ೨ ಲಕ್ಷ ರೂ.ವರೆಗೆ ನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ ೫ ಲಕ್ಷಕ್ಕೆ ಏರಿಕೆ ಮಾಡಲು ಒಕ್ಕೂಟದ ಸಭೆಯಲ್ಲಿ ಒತ್ತಾಯಿಸಲಾಗುವುದು , ಎಲ್ಲಾ ಸಮಸ್ಯೆಗಳನ್ನು ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ ಮಾತನಾಡಿ, ಪಶು ಆಹಾರ ದರ ಏರಿಕೆಯಾಗಿದೆ. ಹಾಲಿನ ಮಾರಾಟ ದರ ಸರ್ಕಾರವು ೩ ರೂ ಏರಿಕೆ ಮಾಡಿದೆ. ಅದೇ ರೀತಿ ಹಾಲಿನ ಖರೀದಿ ದರ ಏರಿಕೆ ಮಾಡಬೇಕಾಗಿದೆ. ಸರ್ಕಾರದಿಂದ ಪ್ರತಿ ಲೀಟರ್ ಗೆ ನೀಡುತ್ತಿರುವ ೫ ರೂ ಪ್ರೋತ್ಸಾಹ ದರ ಹಲವು ತಿಂಗಳಿಂದ ಬಾಕಿ ಇರಿಸಿಕೊಂಡಿದೆ. ಹಸು ಖರೀದಿಗೆ ನೀಡುವ ೬೦ ಸಾವಿರ ಸಾಕಾಗುವುದಿಲ್ಲ ಹಸುವಿನ ಮೌಲ್ಯವು ಸುಮಾರು ಒಂದು ಲಕ್ಷಕ್ಕೂ ಅಧಿಕ ಎಂಬುವುದನ್ನು ಒಕ್ಕೂಟದ ಗಮನಕ್ಕೆ ತರಲಾಗುವುದು. ಲ್ಯಾಕೋ ಮೀಟರಗಳನ್ನು ಸರಿಪಡಿಸಲು ಹಾಗೂ ಪ್ರತಿ ವಾರವೂ ನಿಗಧಿತ ಅವಧಿಯಲ್ಲಿ ಬಟವಾಡೆ ಆಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮಾತನಾಡಿ, ಹಾಲಿನ ಸಂಘಗಳು ಚೆನ್ನಾಗಿದ್ದರೆ ಮಾತ್ರ ಒಕ್ಕೂಟಗಳು ಸಧೃಡವಾಗಿರಲು ಸಾಧ್ಯ. ಹಾಲು ಸಂಘಗಳು ಸಹಕಾರ ಕ್ಷೇತ್ರದಲ್ಲಿ ಯಶಸ್ವಿಯಾಗಿರುವುದರಿಂದ ಒಕ್ಕೂಟಗಳು ಪ್ರಗತಿ ಸಾಧಿಸಲು ಪೂರಕವಾಗಲಿದೆ ಎಂದರು.
ಭಾರತದಲ್ಲಿ ಗುಜರಾತ್ ಅಮುಲ್ ನಂತರ ಕರ್ನಾಟಕದ ನಂದಿನಿ ಎರಡನೇ ಸ್ಥಾನ ಪಡೆದಿದೆ. ಕಳೆದ ೧೯೬೫ರಲ್ಲಿ ಎಂ.ವಿ.ಕೆ ಪ್ರಾರಂಭಿಸಿದ ಬೆಂಗಳೂರಿನ ಹಾಲಿನ ಡೇರಿ ಇಂದು ಹೆಮ್ಮರವಾಗಿ ರಾಜ್ಯದಾದ್ಯಂತ ವ್ಯಾಪಿಸಿದ್ದು ಹೈನುಗಾರಿಕೆ ರೈತರ ಜೀವನಾಡಿ ಎಂದೆನಿಸಿದೆ. ೧೯೮೭ರಲ್ಲಿ ವಿಭಜನೆಯಾಗಿ ಒಕ್ಕೂಟ ರಚಿಸಲಾಯಿತು. ಎಂದು ವಿವರಿಸಿದರು.
ಉಪವ್ಯವಸ್ಥಾಪಕ ಡಾ.ಮಹೇಶ್, ಹಾಲು ಸಹಕಾರ ಸಂಘಗಳ ಕಾರ್ಯದರ್ಶಿ ಶಿವರುದ್ರ, ಹಾಲು ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ವಿಟಪ್ಪನಹಳ್ಳಿ ವೆಂಕಟೇಶ್, ಕುರುಗಲ್ ವೆಂಕಟೇಶ್, ತಲಗುಂದ ನರಸಿಂಹರಾಜು ಇದ್ದರು.